ಕರ್ನಾಟಕ

ನಾವು ಮತ್ತೆ ಅಧಿಕಾರಕ್ಕೆ ಬಂದು, ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇನೆ; ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು(ನ.20): ಮಾಜಿ ಸಿಎಂ ಸಿದ್ದರಾಮಯ್ಯ ಹುಣಸೂರು ಕ್ಷೇತ್ರದಲ್ಲಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಮಂಜುನಾಥ್​ ಪರ ಸಿದ್ದರಾಮಯ್ಯ ಮತಯಾಚಿಸುತ್ತಿದ್ದಾರೆ. ಕಣಗಲ್​​ ಗ್ರಾಮದ ಬಳಿ ಪ್ರಚಾರ ಮಾಡುವಾಗ ಮಾಜಿ ಸಿಎಂ ಮತ್ತೆ ಸಿಎಂ ಆಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

“ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾನು ಬಡವರಿಗೆ 10 ಕೆ.ಜಿ ಅಕ್ಕಿ ಕೊಡುತ್ತೇನೆ,” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಣಗಲ್​ ಗ್ರಾಮದ ಬಳಿ ಘೋಷಣೆ ಮಾಡಿದ್ದಾರೆ.

ಇದೇ ವೇಳೆ, ಸಿದ್ದರಾಮಯ್ಯ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ವಿಶ್ವನಾಥ್ ಬಿಜೆಪಿಯಿಂದ ಬೇರೆ ಎಲ್ಲಿ ಹೋಗುತ್ತಾರೆ ಗೊತ್ತಿಲ್ಲ. ಕಳಂಕ ಹೊತ್ತ ವ್ಯಕ್ತಿಯನ್ನು ಶಾಸಕನನ್ನಾಗಿ ಮಾಡಬೇಕಾ?,” ಎಂದು ಪ್ರಶ್ನಿಸಿದರು.

“ವಿಶ್ವನಾಥ್ ಅಂತವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಯಾವ ಪಕ್ಷದವರನ್ನು ವಿಶ್ವನಾಥ್ ನೆಮ್ಮದಿಯಾಗಿ ಇರಲು ಬಿಡಲ್ಲ. ನಾನು ಸಿಎಂ ಆದಾಗಲೂ ನೆಮ್ಮದಿಯಾಗಿ ಇರಲು ಬಿಡಲಿಲ್ಲ. ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಅಂತಾ ಪತ್ರ ಬರೆದಿದ್ದ. ಜೆಡಿಎಸ್ ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ‌,” ಎಂದು ತೀವ್ರ ಕಿಡಿಕಾರಿದರು.

ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಆರ್ ಪೇಟೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಪರ ಸಿದ್ದರಾಮಯ್ಯ ಮತಬೇಟೆಯಾಡಲಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ 8 ಕಡೆ ಪ್ರಚಾರ ನಡೆಸಲಿದ್ದಾರೆ.

Comments are closed.