ಕರ್ನಾಟಕ

ಹುಟ್ಟುಹಬ್ಬದ ಪಾರ್ಟಿಯಲ್ಲಿ ಯುವಕರಿಬ್ಬರ ಶಂಕಾಸ್ಪದ ಸಾವು

Pinterest LinkedIn Tumblr

ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿಯಂದು ಅಗತ್ಯಕ್ಕಿಂತ ಅಧಿಕ ಮಾತ್ರೆಗಳನ್ನು ಪುಡಿ ಮಾಡಿ ಸೇವಿಸಿದ್ದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಘಟನೆಯಲ್ಲಿ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಅವರು ಈ ಸಂಜೆಗೆ ತಿಳಿಸಿದ್ದಾರೆ. ವಯ್ಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋದಂಡರಾಮಪುರದ ನಿವಾಸಿಗಳಾದ ಅಭಿಲಾಷ್ (23) ಮತ್ತು ಗೋಪಿ (32) ಕಳೆದೆರಡು ದಿನಗಳ ಹಿಂದೆ ಬರ್ತ್‍ಡೇ ಪಾರ್ಟಿ ವೇಳೆ ಸ್ನೇಹಿತರ ಜತೆ ಸೇರಿ ಅತಿಯಾದ ಮಾತ್ರೆ ಜತೆಗೆ ಮದ್ಯ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅಭಿಲಾಷ್ ಮತ್ತು ಗೋಪಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಮೃತರ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇವರಿಬ್ಬರ ಸಾವಿಗೆ ಸೂಕ್ತ ಕಾರಣವೇನು ಎಂಬುದು ಗೊತ್ತಾಗಲಿದೆ. ಈ ಬಗ್ಗೆ ವಯ್ಯಾಲಿಕಾವಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.