ಚಾಮರಾಜನಗರ : ಮನುಷ್ಯರ ಮೇಲೆ ದಾಳಿ ಮಾಡಿ ಕೊಂದ ಹುಲಿಯನ್ನು ನರಭಕ್ಷಕ ಎಂದು ಕರೆಯುವುದನ್ನು ಜನ ರೂಢಿ ಮಾಡಿಕೊಂಡಿದ್ದರು. ಆದರೆ ಇನ್ನು ಮುಂದೆ ಹುಲಿಯನ್ನು ಈ ರೀತಿ ಕರೆಯುವಂತಿಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯನ್ನು “ನರಭಕ್ಷಕ” ಎಂದು ಸಂಬೋಧಿಸದಂತೆ ಆದೇಶ ಹೊರಡಿಸಿದ್ದು, ಅದನ್ನು ಪಾಲಿಸಲೇಬೇಕಾಗಿದೆ.
ಈ ಬಾರಿಯ ಪರಿಷ್ಕೃತ ಕಾರ್ಯವಿಧಿಯಲ್ಲಿ ಈ ಅಂಶವನ್ನು ಪ್ರಾಧಿಕಾರ ಸೇರ್ಪಡೆ ಮಾಡಿದ್ದು, ಹುಲಿಗಳು ಆಕಸ್ಮಾತ್ ಆಗಿ ಮನುಷ್ಯರನ್ನು ಕೊಂದಿರುತ್ತವೆಯಷ್ಟೆ. ಹೀಗೆ ಮನುಷ್ಯನನ್ನು ಆಕಸ್ಮಾತ್ ಆಗಿ ಕೊಲ್ಲುವ ಹುಲಿಗಳೆಲ್ಲವೂ ನರಭಕ್ಷಕವಾಗಿ ಪರಿವರ್ತನೆಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನರಭಕ್ಷಕ ಎಂದು ಸಂಭೋದಿಸುವುದು ಸೂಕ್ತವಲ್ಲ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಜತೆಗೆ ನರಭಕ್ಷಕ ಎನ್ನುವ ಬದಲು ನರ ಕಂಟಕ ಅಥವಾ ಮನುಷ್ಯರಿಗೆ ಅಪಾಯಕಾರಿಯಾದ ಪ್ರಾಣಿ ಎಂದು ಕರೆಯಬಹುದೆಂದು ಹೇಳಿದೆ.
ಇನ್ನು ಹುಲಿಯೊಂದು ಮನುಷ್ಯರಿಗೆ ಕಾಟ ಕೊಡುತ್ತಿದೆ ಎನ್ನುವುದು ಗೊತ್ತಾದರೆ, ಅದನ್ನು ತಕ್ಷಣ ಹಿಡಿಯುವ ಪ್ರಯತ್ನ ನಡೆಸಬೇಕು, ಜತೆಗೆ ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳು, ಅಂದರೆ ಶಾರ್ಪ್ ಶೂಟರ್ ಗಳನ್ನು ಕೂಡ ಅರಣ್ಯ ಇಲಾಖೆ ನಿರ್ಬಂಧಿಸಿದೆ. ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಅವನಿ ಎಂಬ ಹುಲಿ ಗುಂಡಿಗೆ ಬಲಿಯಾಗಿದ್ದರ ಹಿನ್ನೆಲೆ ಈ ನಿರ್ಧಾರಕ್ಕೆ ಮುಖ್ಯ ಕಾರಣ.
ಈ ಹುಲಿ ಕಾಡಿನ ಸುತ್ತಮುತ್ತಲ 13 ಗ್ರಾಮಸ್ಥರನ್ನು ಕೊಂದು ಹಾಕಿದ್ದ ಕಾರಣಕ್ಕೆ ನರಭಕ್ಷಕ ಎಂಬ ಪಟ್ಟ ಕಟ್ಟಲಾಗಿತ್ತು. ಆದರೆ ಅಷ್ಟೂ ಜನರೂ ಇದೇ ಹುಲಿಯನ್ನು ಕೊಂದಿರುವ ಪುರಾವೆಯಿರಲಿಲ್ಲ. ಆದರೆ ವದಂತಿ ಹೆಚ್ಚಾದಾಗ ಸುಪ್ರೀಂಕೋರ್ಟ್ ಗುಂಡಿಕ್ಕಿ ಕೊಲ್ಲುವಂತೆ ಆದೇಶ ನೀಡಿತ್ತು. ನಿಯಮದ ಪ್ರಕಾರ ಇದನ್ನು ಸಾಯಿಸಿಲ್ಲ ಎಂಬುದು ಪರಿಸರವಾದಿಗಳ ಅಭಿಪ್ರಾಯ.
ಹೊಸ ಎನ್‌ಟಿಸಿಎ ಮಾರ್ಗಸೂಚಿಗಳನ್ನು ಅನುಸರಿಸಿದರೆ ಕೊಲ್ಲುವುದರಲ್ಲಿ ಕೊನೆಗೊಳ್ಳುವುದಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಉಳಿಸಬಹುದು, ತರಬೇತಿ ಪಡೆದ ಪಶುವೈದ್ಯಕೀಯ ವೈದ್ಯರು ಮಾತ್ರ ಪ್ರಾಣಿಗಳನ್ನು ತೊಂದರೆಗೊಳಿಸದೆ ದೊಡ್ಡ ಪ್ರಾಣಿಗಳನ್ನು ಯಶಸ್ವಿಯಾಗಿ ಸೆರೆಹಿಡಿಯಬಹುದಾಗಿದೆ.
Comments are closed.