
“ಮನೆಯಲ್ಲಿ ನನ್ನ ಹೆಂಡತಿ ಇಲ್ಲ ಬಂದು ಅಡುಗೆ ಮಾಡು,” ಎಂದು ಪ್ರತಿಷ್ಠಿತ ಜಿ.ಬಿ ಪಂತ್ವಿಶ್ವವಿದ್ಯಾಲಯದ ಪ್ರೊಫೆಸರ್ ವಿದ್ಯಾರ್ಥಿನಿಗೆ ಮಧ್ಯರಾತ್ರಿ ಕರೆ ಮಾಡಿ ಕರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
“ಅಕ್ಟೋಬರ್ನಲ್ಲಿ ನಡೆದ ವಿಶ್ವವಿದ್ಯಾಲಯದ ಶಿಸ್ತಿನ ಸಮಿತಿ ಸಭೆಯಲ್ಲಿ ಉಪಕುಲಪತಿ ಮುಂದೆ ಈ ವಿಷಯವನ್ನು ವಿದ್ಯಾರ್ಥಿನಿಯೊಬ್ಬರು ಎತ್ತಿದ್ದಾರೆ. ಆಕೆ ಯಾವುದೇ ಲಿಖಿತ ದೂರು ದಾಖಲಿಸದ ಕಾರಣ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ,”ಎಂದು ಪಂತ್ ವಿಶ್ವವಿದ್ಯಾಲಯದ ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ.ಸಲೀಲ್ ತಿವಾರಿ ತಿಳಿಸಿದ್ದಾರೆ.
ಹುಡುಗಿಯರ ಹಾಸ್ಟೆಲ್ ವಾರ್ಡನ್ ಉಸ್ತುವಾರಿ ವಹಿಸಿಕೊಂಡಿದ್ದ ಪ್ರೊಫೆಸರ್ ಮಧ್ಯರಾತ್ರಿ ವಿದ್ಯಾರ್ಥಿನಿಗೆ ಕರೆ ಮಾಡಿದ್ದರು ಎಂದು ಹುಡುಗಿಯರು ಉಪಕುಲಪತಿಗೆ ದೂರು ನೀಡಿದ್ದಾರೆ. ಆಕೆ ಫೋನ್ ಕರೆಯನ್ನು ಕಟ್ ಮಾಡಿದರೂ ಸಹ, ಪದೇ ಪದೇ ಫೋನ್ ಬರುತ್ತಿತ್ತು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಒಂದು ದಿನ ಮಧ್ಯರಾತ್ರಿ ಪ್ರೊಫೆಸರ್ ನನ್ನ ಹುಟ್ಟುಹಬ್ಬಕ್ಕೆ ಶುಭಾಷಯ ತಿಳಿಸಲು ಮೆಸೇಜ್ ಮಾಡಿದ್ದರು. ಬಳಿಕ ‘ನನ್ನ ಹೆಂಡತಿ ಮನೆಯಲ್ಲಿಲ್ಲ, ಅಡುಗೆ ಮಾಡುವವರು ಯಾರು? ನೀನು ಬಂದು ಅಡುಗೆ ಮಾಡು,’ ಎಂದು ಕರೆದಿದ್ದರು,” ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾಳೆ.ಆಕೆ ಪ್ರೊಫೆಸರ್ ಕಳುಹಿಸಿರುವ ಮೆಸೇಜ್ಗಳನ್ನು ವಿಶ್ವವಿದ್ಯಾಲಯದ ಸಮಿತಿಗೆ ತೋರಿಸಿದರೂ, ಈವರೆಗೆ ಪ್ರೊಫೆಸರ್ ವಿರುದ್ಧ ಯಾವುದೇ ಬಲವಾದ ಕ್ರಮ ಕೈಗೊಂಡಿಲ್ಲ.
ಈ ಘಟನೆ ನಡೆದಾಗ ಆರೋಪಿ ಪ್ರಾಧ್ಯಾಪಕ ಹುಡುಗಿಯರ ಹಾಸ್ಟೆಲ್ ವಾರ್ಡನ್ ಆಗಿದ್ದರು. ವಿಷಯ ಬೆಳಕಿಗೆ ಬಂದ ಬಳಿಕ ಅಕ್ಟೋಬರ್ನಲ್ಲಿ ಹಾಸ್ಟೆಲ್ ವಾರ್ಡನ್ ಹುದ್ದೆಯಿಂದ ತೆಗೆದುಹಾಕಲಾಯಿತು ಎಂದು ವಿವಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಬಿ ಪಂತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ವಿರುದ್ಧ ವಿದ್ಯಾರ್ಥಿ ಮಾಡಿರುವ ಆರೋಪವನ್ನು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರು ಮನಗಂಡಿದ್ದಾರೆ. ಈ ಕುರಿತು ತನಿಖೆ ನಡೆಸಿ ಪ್ರಾಧ್ಯಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರು ಉಪಕುಲಪತಿಗೆ ಸೂಚನೆ ನೀಡಿದ್ದಾರೆ.
ಪಂತ್ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅವರು ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೆಲ್ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಉಪಕುಲಪತಿಯಿಂದ ವರದಿ ನೀಡುವಂತೆ ಸೂಚಿಸಿದ್ದಾರೆ.
ರಾಜ್ಯಪಾಲರ ನಿರ್ದೇಶನದಂತೆ ಅವರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪಂತ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಎಪಿ ಶರ್ಮಾ ತಿಳಿಸಿದ್ದಾರೆ. “ನಾವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಪ್ರಾಧ್ಯಾಪಕರನ್ನು ಈಗಾಗಲೇ ವಾರ್ಡನ್ ಹುದ್ದೆಯಿಂದ ತೆಗೆದುಹಾಕಲಾಗಿದೆ. ಇಲ್ಲಿ ಅಧ್ಯಯನ ಮಾಡುವ ಹುಡುಗಿಯರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ನಾವು ಖಚಿತಪಡಿಸುತ್ತೇವೆ, ”ಎಂದು ಅವರು ಹೇಳಿದರು.
Comments are closed.