ಕರ್ನಾಟಕ

ಹುಂಡಿಯಲ್ಲಿ ಹಣ, ಚಿನ್ನ, ಬೆಳ್ಳಿ ಕಾಣಿಕೆಗಳ ಜೊತೆ ಪ್ರೇಮಪತ್ರ ಪತ್ತೆ

Pinterest LinkedIn Tumblr

ಬೆಂಗಳೂರು : ನಗರದ ಬನಶಂಕರಿಯಲ್ಲಿರುವ ಪ್ರತಿಷ್ಠಿತ ಬನಶಂಕರಿದೇವಿ ದೇವಾಲಯದ ಹುಂಡಿ ಹಣ ಎಣಿಸುವ ಕಾರ್ಯ ಇಂದು ನಡೆಯಿತು. ಈ ದೇವಾಸ್ಥಾನದಲ್ಲಿ ಪ್ರತೀ ಶುಕ್ರವಾರ ವಿಶೇಷ ಪೂಜೆ ನೆರವೇರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಬನಶಂಕರಿ ದೇವಿಗೆ ಭಕ್ತರು ಕಾಣಿಕೆಯನ್ನು ಅರ್ಪಿಸುತ್ತಾರೆ. ಹೀಗಾಗಿ ಕೋಟ್ಯಂತರ ರೂಪಾಯಿ ಹಣ ದೇವಿಯ ಹುಂಡಿಗೆ ಹರಿದು ಬರುತ್ತದೆ.

ಇಂದು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬನಸಂಕರಿ ದೇವಿಯ ಹುಂಡಿ ತೆರೆಯಲಾಯಿತು. ಕಳೆದ 22 ದಿನಗಳಿಂದ ಸಂಗ್ರಹವಾಗಿದ್ದ ಹಣವನ್ನು ಎಣಿಸಲಾಯಿತು. ಜನವರಿ ತಿಂಗಳಲ್ಲಿ ಬನಶಂಕರಿ ದೇವಿಯ ಜಾತ್ರೆ ಇರುವ ಹಿನ್ನೆಲೆ, ಈಗಲೇ ಅಧಿಕಾರಿಗಳು ಹುಂಡಿಯನ್ನು ತೆಗೆದರು.

ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಹುಂಡಿ ಹಣ ಎಣಿಸಲಾಯಿತು. ಹುಂಡಿಯಲ್ಲಿ ಒಟ್ಟು 30 ಲಕ್ಷದ 90 ಸಾವಿರದ 77 ರೂಪಾಯಿ ಹಣ ಸಂಗ್ರಹವಾಗಿದೆ.

ವಿಚಿತ್ರ ಎಂದರೆ, ಹುಂಡಿಯಲ್ಲಿ ಹಣ, ಚಿನ್ನ, ಬೆಳ್ಳಿ ಹಾಗೂ ಇನ್ನಿತರೆ ಕಾಣಿಕೆಗಳ ಜೊತೆಗೆ ಪ್ರೇಮಪತ್ರವೊಂದು ಪತ್ತೆಯಾಗಿದೆ. ಯುವತಿಯೊಬ್ಬಳು ತಾನು ಪ್ರೀತಿಸುತ್ತಿರುವ ಯುವಕನಿಗೆ ಬರೆದಿರುವ ಪತ್ರ ಇದಾಗಿದೆ. ಅದು, ಬರೋಬ್ಬರಿ 4 ಪುಟಗಳಿದ್ದು, ಅಧಿಕಾರಿಗಳು ಲವ್​ ಲೆಟರ್​ ನೋಡಿ ದಂಗಾಗಿದ್ಧಾರೆ.

ದೇವಾಲಯದ ಹುಂಡಿಗಳಿಗೆ ಭಕ್ತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಈ ರೀತಿ ಪತ್ರಗಳನ್ನು ಹಾಕುವುದು ಸಹಜ. ಹಾಸನದ ಹಾಸನಾಂಬೆ ದೇವಾಲಯದಲ್ಲೂ ಪ್ರೇಮ ನಿವೇದನೆ ಪತ್ರಗಳು ದೊರಕಿದ್ದವು. ಜೊತೆಗೆ ಪರೀಕ್ಷೆಯಲ್ಲಿ ಪಾಸು ಮಾಡು ಎಂದೆಲ್ಲಾ ಪತ್ರ ಬರೆದು ದೇವರಿಗೆ ಬೇಡಿಕೆ ಇಟ್ಟಿದ್ದರು.

Comments are closed.