ಕರ್ನಾಟಕ

ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿದ ಪ್ರವಾಸಿಗರು

Pinterest LinkedIn Tumblr

ಚಿಕ್ಕಮಗಳೂರು: ಚಳಿಗಾಲ ಆರಂಭವಾಗಿದ್ದು, ಕಾಫಿನಾಡಿನ ಫಾಲ್ಸ್‌ಗಳಿಗೆ ಜೀವಕಳೆ ಬಂದು ಗಿರಿಯ ಪ್ರಕೃತಿ ವಿಸ್ಮಯವನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಳಿಯ ಗಾಳಿಯೊಂದಿಗಿನ ಮಂಜಿನಾಟ ನೋಡುಗರಿಗೆ ರಸದೌತಣ. ಇಲ್ಲಿನ ಮನಮೋಹಕ ತಾಣಗಳಿಗೆ ಫಿದಾ ಆಗಿರುವ ಪ್ರವಾಸಿಗರಿಗೆ ಕಾಫಿನಾಡೆಂದರೆ ಪುಣ್ಯಭೂಮಿ. ಅದರಲ್ಲೂ ಈ ಬಾರಿ ನವೆಂಬರ್ ನ ಚಳಿಯಲ್ಲೂ ಕಾಫಿನಾಡಿನ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತಗಳು ನವೆಂಬರ್-ಡಿಸೆಂಬರ್ ವೇಳೆಗೆ ಶಾಂತವಾಗಿರುತ್ತವೆ. ಆದರೆ ಈ ಬಾರಿ ಗಿರಿಯಲ್ಲಿನ ನಿರಂತರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ, ಕಲ್ಲತ್ತಿಗರಿ, ಝರಿ ಫಾಲ್ಸ್‌ಗಳು ನವೆಂಬರ್ ನ ಚಳಿಯಲ್ಲೂ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿವೆ.

ಕಾಫಿನಾಡಿನ ಗಿರಿಭಾಗದ ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ ಈ ಝರಿಯೇ ಜಂಕ್ಷನ್, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲ ಈ ಮಿನಿ ಜಲಪಾತದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನೀರಲ್ಲಿ ಆಡಿ, ಫೋಟೋ ಶೂಟ್ ಮಾಡಿಸಿಕೊಂಡೇ ಮುಂದೆ ಹೋಗುತ್ತಾರೆ.

ಚಿಕ್ಕಮಗಳೂರಿನ ಕೈ ಮರದಿಂದ ಹೊರಟರೆ, ಹಾವು ಬಳುಕಿನ ಮೈಕಟ್ಟಿನ ರಸ್ತೆಯುದ್ದಕ್ಕೂ ಎಂಜಾಯ್ ಮಾಡುತ್ತಲೇ ಸಾಗುವ ಪ್ರವಾಸಿಗರು ಗಿರಿಭಾಗಕ್ಕೆ ಎಂಟ್ರಿ ಕೊಟ್ಟ ಕೂಡಲೇ ಹೆಜ್ಜೆ-ಹೆಜ್ಜೆಗೂ ಮಲೆನಾಡನ್ನ ಸುಖಿಸುತ್ತಾರೆ. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ನೋಡ-ನೋಡುತ್ತಿದ್ದಂತೆಯೇ ಮೋಡ ದಾರಿಯೇ ಕಾಣದಂತೆ ಕವಿದರೆ, ಕ್ಷಣಾರ್ಧದಲ್ಲಿ ತಣ್ಣಗೆ ಬೀಸುವ ಗಾಳಿ ಪ್ರವಾಸಿಗರ ಅನುಕೂಲಕ್ಕೆಂದೇ ಇದೆ ಏನೋ ಎಂದು ಅನ್ನಿಸುತ್ತೆ.

ಇಲ್ಲಿನ ಗಾಳಿ ಹಾಗೂ ಮೋಡದ ನಡುವಿನ ಚೆಲ್ಲಾಟ ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವುದೇ ಪ್ರವಾಸಿಗರಿಗೆ ಬಲು ಪ್ರೀತಿ. ಇಂತಹ ಸಂಪದ್ಭರಿತ ನಾಡಿಗೆ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಬರಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆಯಾಗಿದೆ. ಕಾಫಿನಾಡಲ್ಲಿ ಇಂತಹ ಅದೆಷ್ಟೋ ನೈಸರ್ಗಿಕ ತಾಣಗಳಿವೆ. ಅವುಗಳಲ್ಲಿ ಬೆಳಕಿಗೆ ಬಂದಿರುವುದು ಒಂದೆರೆಡಾದರೆ, ಬಾರದಿರೋದು ಹತ್ತಾರು ಇವೆ.

Comments are closed.