ಕರ್ನಾಟಕ

ಬೈಕ್ ಡಿಕ್ಕಿ: ಮದುವೆ ಆಮಂತ್ರಣ ಕೊಡಲು ಹೋಗಿದ್ದ ವರ ಸಾವು

Pinterest LinkedIn Tumblr


ಧಾರವಾಡ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿಯ ನಿವಾಸಿ ಮಹಮ್ಮದ್‍ಅಸ್ಲಾಂ ಸಿಕಂದರ್ ಶಹಾಪುರ (24) ಮೃತ ವರ. ಘಟನೆಯಲ್ಲಿ ಹಿಂಬದಿಯ ಸವಾರ ಇಷಾಕ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಹಮ್ಮದ್‍ಅಸ್ಲಾಂ ಅವರ ಮದುವೆ ಡಿಸೆಂಬರ್ 1ರಂದು ನಿಶ್ಚಯವಾಗಿತ್ತು. ಹೀಗಾಗಿ ಸಂಬಂಧಿಕರಿಗೆ ಮದುವೆ ಆಮಂತ್ರಣ ನೀಡಲು ಬೈಕ್‍ನಲ್ಲಿ ಸವದತ್ತಿಯಿಂದ ಧಾರವಾಡಕ್ಕೆ ಬಂದಿದ್ದರು. ಆಮಂತ್ರಣ ನೀಡಿ ವಾಪಸ್ ಹೋಗುವಾಗ ಅಮ್ಮಿನಬಾವಿ ಗ್ರಾಮದ ಬಳಿ ಬೈಕ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಮ್ಮದ್‍ಅಸ್ಲಾಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಮ್ಮದ್‍ಅಸ್ಲಾಂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.