ಕರ್ನಾಟಕ

ರೈತ ಮುಖಂಡರ ಜೊತೆ ಸಭೆ ನಡೆಸಿದ ಯಡಿಯೂರಪ್ಪ; 20 ಬೇಡಿಕೆಗಳಿಟ್ಟ ಅನ್ನದಾತರು

Pinterest LinkedIn Tumblr


ಬೆಂಗಳೂರು(ನ.12): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದ ಹಿನ್ನೆಲೆ, ಇಂದು ಸಿಎಂ ಬಿಎಸ್​ಯಡಿಯೂರಪ್ಪ ಅನ್ನದಾತರ ಜೊತೆ ಸಭೆ ನಡೆಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ನೇತೃತ್ವದಲ್ಲಿ ಅನೇಕ ರೈತರು ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು.

ಸಾಲ ಮನ್ನಾ ವಿಷಯದಲ್ಲಿ ರೈತರಿಗೆ ಬ್ಯಾಂಕ್ ಗಳಿಂದ ನೋಟಿಸ್ ನೀಡಿದ್ದನ್ನು ವಿರೋಧಿಸಿ ಹಾಗೂ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಿಎಂ ಬಿಎಸ್​ವೈ ರೈತರ ಸಭೆ ನಡೆಸುವುದಾಗಿ ಭರವಸೆ ಕೊಟ್ಟಿದ್ದರು.

ಅತಿವೃಷ್ಟಿಯಲ್ಲಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಆದಷ್ಟು ಬೇಗ ಪರಿಹಾರ ಕೊಡಿಸಿ ಎಂದು ರೈತ ಮುಖಂಡರು ಸಭೆಯಲ್ಲಿ ಸಿಎಂಗೆ ಮನವಿ ಮಾಡಿದರು. ಅಲ್ಲದೇ, ಬರಗಾಲ ಪೀಡಿತ ಪ್ರದೇಶಗಳಲ್ಲಿ ಬರ ಪರಿಹಾರ ಕಾರ್ಯಗಳನ್ನು ಮಾಡುವಂತೆ ಹಾಗೂ ರೈತರಿಗೆ ಬ್ಯಾಂಕ್​​​ಗಳಿಂದ ಕೊಡುತ್ತಿರುವ ನೋಟಿಸ್ ತಪ್ಪಿಸುವಂತೆ ಒತ್ತಾಯಿಸಿದರು.

ಇಷ್ಟು ಬೇಡಿಕೆಗಳನ್ನು ಇಂದಿನ ಸಭೆಯಲ್ಲಿ ರೈತರು ಸಿಎಂ ಮುಂದೆ ಇಟ್ಟರು. ರೈತರ ಈ ಮನವಿಗಳನ್ನು ಸ್ವೀಕಾರ ಮಾಡಿದ ಸಿಎಂ ಬಿಎಸ್​ವೈ, ಸರ್ಕಾರದ ಇತಿಮಿತಿಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. “ನಮ್ಮ ಸರ್ಕಾರದ ಇತಿಮಿತಿಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಆದಷ್ಟು ಬೇಗ ಬಗೆಹರಿಸುತ್ತೇನೆ. ಯಾವುದರ ಬಗ್ಗೆಯೂ ಯೋಚನೆ ಮಾಡಬೇಡಿ,” ಎಂದು ಸಿಎಂ ರೈತರಿಗೆ ಭರವಸೆ ನೀಡಿದರು. ಇದೇ ವೇಳೆ ಚೆಕ್ ಬೌನ್ಸ್ ಗಳಲ್ಲಿ ಯಾವುದೇ ರೈತರನ್ನು ಬಂಧಿಸದಂತೆ ಕ್ರಮ‌ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ರೈತರ ಬೇಡಿಕೆಗಳು:

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷಕ್ಕೆ ಕಡಿಮೆಯಾಗದ ರೀತಿಯಲ್ಲಿ ಗುಣಮಟ್ಟದ ಮನೆ ನಿರ್ಮಾಣ.
ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ.
ಪ್ರವಾಹದಿಂದ ನಷ್ಟವಾದ ಆಯಾಯ ಬೆಳೆಗಳಿಗೆ ಅನುಗುಣವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ನಷ್ಟ ಸರಿದೂಗಿಸಬೇಕು.
ಪ್ರವಾದಿಂದ ಪ್ರತಿ ವರ್ಷ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಬೇಕು.
ಪ್ರವಾಹದಿಂದ ಸಂಪೂರ್ಣವಾಗಿ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು.
ಬರಗಾಲ ಮತ್ತು ಪ್ರವಾಹದಿಂದ ತತ್ತರಿಸಿರುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು.
ಬರಗಾಲ ಪೀಡಿತ ರೈತರ ಜಮೀನುಗಳಿಗೆ ಎಕರೆಗೆ 25 ಸಾವಿರ ನೀಡಬೇಕು.
ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು.
ನೀರಾವರಿ ಯೋಜನೆಗಳಿಗೆ ಬಜೆಟ್ ನಲ್ಲಿ 1 ಲಕ್ಷ ಕೋಟಿ ನಿಗದಿ ಪಡಿಸಬೇಕು.
60 ವರ್ಷ ತುಂಬಿದ ಪ್ರತಿ ರೈತರಿಗೆ ಪ್ರತಿ ತಿಂಗಳು 10 ಸಾವಿರ ಮಾಸಾಶನ ನೀಡಬೇಕು.
ಬೆಳೆ ವಿಮೆಯನ್ನು ವೈಜ್ಞಾನಿಕವಾಗಿ ಮಾಡಬೇಕು.
ಒಂದು ಲೀಟರ್ ಹಾಲಿಗೆ 50 ರೂಪಾಯಿ ನಿಗದಿ ಮಾಡಬೇಕು.
ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯಬೇಕು.
ಪ್ರತಿ ಟನ್ ಕಬ್ಬಿಗೆ 3,500 ರೂ. ಗಳನ್ನು ನಿಗದಿ ಮಾಡಬೇಕು.
ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು.
ಮಹದಾಯಿ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು.
ಒಂದು ಕೆ.ಜಿ ರೇಷ್ಮೆ ಗೂಡಿಗೆ 500 ರೂಗಳ ಬೆಲೆ ನಿಗದಿ ಮಾಡಬೇಕು.
ರೈತ ಚಳುವಳಿಯಲ್ಲಿ ಗೋಲಿಬಾರ್​​​ನಲ್ಲಿ ಮೃತಪಟ್ಟ ರೈತನ ಕುಟುಂಬಕ್ಕೆ 10,000 ರೂಗಳನ್ನು ಮಾಸಾಶನ ನೀಡಬೇಕು.
ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು.
ಕುರಿ, ಕೋಳಿ, ಹಂದಿ, ಮೀನು, ಹೈನುಗಾರಿಕೆ, ಹೂವು, ತರಕಾರಿ ಮತ್ತು ಇತರೆ ಗೃಹ ಕೈಗಾರಿಕೆಗಳಿಗೆ ಶೇ. 75 ರಷ್ಟು ಸಹಾಯಧನ ನೀಡಬೇಕು.

Comments are closed.