ರಾಷ್ಟ್ರೀಯ

ಶರದ್‌ ಪವಾರ್‌ ತೋಡಿದ ಖೆಡ್ಡಾಗೆ ಬಿದ್ದ ಬಿಜೆಪಿ, ಶಿವಸೇನೆ

Pinterest LinkedIn Tumblr


ಮಹಾರಾಷ್ಟ್ರ ಚುನಾವಣೆ ಫಲಿತಾಂಶ ಹೊರಬಿದ್ದಂತೆ ‘ಜನಾದೇಶಕ್ಕೆ ಬದ್ಧವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ’ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಬಹಳ ಸ್ಪಷ್ಟವಾಗಿ ಹೇಳಿದ್ದರು. ಹೇಳಿದಂತೆ ನಾಟಕ ಮಾಡಿದರು! 50-50 ಅಧಿಕಾರ ಹಂಚಿಕೆಗೆ ಬಿಜೆಪಿ ಬದ್ಧವಾಗಿಲ್ಲ ಎಂದು ಮುನಿಸಿಕೊಂಡ ಶಿವಸೇನೆ, ಏನಾದರೂ ಆಗಲಿ ಸರಕಾರ ರಚಿಸಿಯೇ ಬಿಡುತ್ತೇವೆ ಎನ್ನುತ್ತ ಬೆಂಬಲಕ್ಕಾಗಿ ಎನ್‌ಸಿಪಿ ಬಳಿ ಹೋದಾಗಲೂ ‘ನಮಗೆ ಜನಾದೇಶವಿಲ್ಲ, ಪ್ರತಿಪಕ್ಷದಲ್ಲೇ ಕೂರುತ್ತೇವೆ’ ಎಂದು ಪುನರುಚ್ಛರಿಸಿದ್ದರು ಶರದ್‌ ಪವಾರ್‌.
ಸರಕಾರ ರಚಿಸೋ ಆಟದಲ್ಲಿ ನಾವಿಲ್ಲ ಎಂದು ಹೊರಗೆ ಹೇಳಿಕೊಳ್ಳುತ್ತಿದ್ದರೂ ‘ಚಾಣಕ್ಷ್ಯ ಅಮಿತ್‌ ಶಾ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವನ್ನು ಹೇಗೆ ರಚಿಸುತ್ತಾರೆ ಎಂಬ ಕುತೂಹಲವಿದೆ’ ಎನ್ನುವ ಮೂಲಕ ಪರೋಕ್ಷವಾಗಿ ಶರದ್‌ ಪವಾರ್‌ ತೊಡೆ ತಟ್ಟಿದ್ದರು. ಸ್ವತಃ ಶಿವಸೇನೆಯೇ ಅಚ್ಚರಿಗೊಳ್ಳುವಂತೆ, ಮುಂದಿನ ಭವಿಷ್ಯದ ಬಗ್ಗೆ ದಿಗಿಲುಗೊಳ್ಳುವಂತೆ ಸರಕಾರ ರಚನೆಗೆ ರಾಜ್ಯಪಾಲರು ಎನ್‌ಸಿಪಿಗೆ ಆಹ್ವಾನ ನೀಡಿದ್ದಾರೆ. ಸರಕಾರ ರಚಿಸುವ ಪವರ್‌ ತನ್ನ ಬಳಿಗೆ ಬರುವಂತೆ ಎನ್‌ಸಿಪಿ ಮಾಡಿದ್ದು ಹೇಗೆ? ಮಹಾರಾಷ್ಟ್ರದಲ್ಲಿ ಮದಗಜಗಳಂತೆ ಆಡುತ್ತಿದ್ದ ಬಿಜೆಪಿ ಮತ್ತು ಶಿವಸೇನೆಯ ಸೊಕ್ಕು ಮುರಿದು ಖೆಡ್ಡಾಗೆ ಕೆಡವಿದ್ದು ಹೇಗೆ? ತಂತ್ರಗಾರಿಕೆಯಲ್ಲಿ ರಾಜಕೀಯ ಚಾಣಕ್ಷ್ಯ ಅಮಿತ್‌ ಶಾಗೆ ಸಡ್ಡು ಹೊಡೆದಿದ್ದು ಹೇಗೆ?

ಮನೆಬಾಗಿಲಿಗೆ ಬಂದ ಶಿವಸೇನೆಗೆ ಶರದ್‌ ಪವಾರ್‌ ಬುದ್ಧಿ ಮಾತೊಂದನ್ನು ಹೇಳುತ್ತಾರೆ. ‘ಬಿಜೆಪಿ ಜತೆ ಸೇರಿ ಸರಕಾರ ರಚಿಸಿ’ ಎಂಬುದು ಪವಾರ್‌ ಅವರು ಶಿವಸೇನೆಗೆ ಕೊಟ್ಟ ಸಲಹೆ. ಅಂದರೆ ಶಿವಸೇನೆ ಅನಿವಾರ್ಯವಾಗಿ ನಮಗೆ ಬೆಂಬಲ ನೀಡುತ್ತಿದೆ ಎಂಬ ಭಾವನೆ ಬಿಜೆಪಿಯಲ್ಲಿ ಮೂಡುವಂತೆ ಮಾಡುವುದು ಈ ಬುದ್ಧಿ ಮಾತಿನ ಹಿಂದಿನ ಉದ್ದೇಶ. ಜತೆಗೆ ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತಗಳನ್ನು ಬದಿಗಿಡಲು ಶಿವಸೇನೆ ಸಿದ್ಧವಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿಸಿತು. ಇದು ಶಿವಸೇನೆಗೆ ಗೊತ್ತಿಲ್ಲದಂತೆ ಬಿದ್ದಿರುವ ಬಲವಾದ ಪೆಟ್ಟು!

ಮೊದಲಿನಿಂದಲೂ ಬಿಜೆಪಿ ನಿರ್ಧಾರಗಳನ್ನು ಬಲವಾಗಿ ಟೀಕಿಸುತ್ತ ಬಂದಿದ್ದರೂ ಚುನಾವಣೆ ಪೂರ್ವ ಬಿಜೆಪಿ ಜತೆಗೆ ಹೋಗಿದ್ದು ಗೊತ್ತೆ ಇದೆ. ಎಷ್ಟೇ ಜಗಳ ಮಾಡಿಕೊಂಡರೂ ಕೊನಗೆ ಶಿವಸೇನೆಗೆ ಬಿಜೆಪಿಯೇ ಗತಿ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಗುಸು ಗುಸು. ಇಂತಹ ಸ್ಥಿತಿಯಲ್ಲಿ ಯಾರು ತಾನೇ ಶಿವಸೇನೆ ಜತೆ ಸೇರಿ ಸರಕಾರ ರಚನೆಗೆ ಮುಂದಾಗುತ್ತಾರೆ? ಹಾಗಾಗಿ ಸ್ವತಃ ಬಿಜೆಪಿಯೇ ಸರಕಾರ ರಚಿಸುವುದಿಲ್ಲ ಎಂದು ಖಾತರಿಪಡಿಸುವುದಕ್ಕಾಗಿ ಎನ್‌ಸಿಪಿ ಕಾದು ಕುಳಿತಿತ್ತು. ಯಾವಾಗ ಬಿಜೆಪಿ-ಶಿವಸೇನೆ ಮೈತ್ರಿ ಮುಗಿದ ಅಧ್ಯಾಯ ಎಂಬುದು ಸ್ಪಷ್ಟವಾಯಿತೋ ತಕ್ಷಣ ಕಾಂಗ್ರೆಸ್‌ ಜತೆ ಸೇರಿ ಸರಕಾರ ರಚನೆಯ ಪ್ಲಾನಿಂಗ್‌ ಸಿದ್ಧಪಡಿಸತೊಡಗಿತು. ಇದುವರೆಗೆ ಬಿಜೆಪಿ ವಿರುದ್ಧ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆಗಳು ಎನ್‌ಸಿಪಿ-ಕಾಂಗ್ರೆಸ್‌ನಿಂದ ಹೊರಬಂದಿಲ್ಲ. ಅತ್ಯಂತ ರಹಸ್ಯವಾಗಿ ತಮ್ಮ ಕಾರ್ಯಸೂಚಿಯನ್ನು ಹೆಣೆದವು. ಈ ನಡುವೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದರಷ್ಟೇ ಶಿವಸೇನೆಗೆ ಬೆಂಬಲ ಎನ್ನುವ ಮತ್ತೊಂದು ಅಸ್ತ್ರ ಪ್ರಯೋಗಿಸಿತು. ಇದರ ಫಲವಾಗಿ ಕೇಂದ್ರದಲ್ಲಿ ಸಚಿವರಾಗಿದ್ದ ಶಿವಸೇನೆ ಸಂಸದ ಅರವಿಂದ ಸಾವಂತ್‌ ರಾಜೀನಾಮೆ ನೀಡಿದರು.

ಕರ್ನಾಟದಲ್ಲಿ ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳು ಬಹಿರಂಗವಾಗಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದೇ ನಮ್ಮ ಗುರಿ ಎಂದು ಸಾರಿಕೊಂಡವು. ಆದರೆ ಮಹಾರಾಷ್ಟ್ರದಲ್ಲಿ ಅಂತಹ ಒಂದೇ ಒಂದು ಧ್ವನಿಯೂ ಕೇಳಿಬರಲಿಲ್ಲ. ಬಹಳ ನಾಜೂಕಾಗಿ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರ ಸರಿಸುವಲ್ಲಿ ಯಶಸ್ವಿಯಾದವು. ಇದರ ನೇತೃತ್ವ ವಹಿಸಿಕೊಂಡಿರುವುದೇ ಶರದ್‌ ಪವಾರ್‌ ಎಂಬುದು ಈಗಷ್ಟೇ ಎಲ್ಲರಿಗೂ ಖಾತರಿಯಾಗುತ್ತಿದೆ. ಕೇಂದ್ರದಲ್ಲಿ ಎನ್‌ಡಿಎ ಬಲ ಕುಗ್ಗುವಂತೆ ಮಾಡಿತು, ರಾಜ್ಯದಲ್ಲಿ ಮೂರು ದಶಕಗಳ ಮೈತ್ರಿ ಮುರಿಯುವಂತೆ ಮಾಡಿತು, ‘ಹಿಂದುತ್ವ’ ಮತಬ್ಯಾಂಕ್‌ ಒಡೆದು ಹೋಗುವಂತೆ ಮಾಡಿತು. ಹಾಗೇ ಅಧಿಕಾರ ತಾನಾಗೇ ಒಲಿದು ಬರುವಂತೆಯೂ ಮಾಡಿಕೊಂಡಿತು! ಇಷ್ಟೆಲ್ಲಾ ತಂತ್ರಗಾರಿಕೆ ನಡೆಸಿದ ಎನ್‌ಸಿಪಿಗೆ ಅಮಿತ್‌ ಶಾ ಪ್ರತಿತಂತ್ರ ಹೆಣೆಯದೇ ಇರುತ್ತಾರಾ? ಮಾಹಾರಾಷ್ಟ್ರದಲ್ಲಿ ‘ಕುದುರೆ ವ್ಯಾಪಾರ’ದ ಸದ್ದು ಕೇಳಲು ಆರಂಭವಾಗುತ್ತದಾ? ಕಾದು ನೋಡಬೇಕಿದೆ.

Comments are closed.