ಕರ್ನಾಟಕ

ಕಲಬುರುಗಿಯಲ್ಲಿ ಫೆಬ್ರವರಿ 5ರಿಂದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನ ನಿಗದಿ

Pinterest LinkedIn Tumblr


ಕಲಬುರಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ವರ್ಷದ ಫೆಬ್ರವರಿ 05ರಂದು ಕಲಬುರಗಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಲಬುರಗಿಯಲ್ಲಿ ಕನ್ನಡ ಜಾತ್ರೆಯು ಮೂರು ದಿನಗಳ ಕಾಲ ನಡೆಯಲಿರುವುದು.

ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಾಹಿತಿಗಳ, ಸಂಘಟಕರ ಸಭೆ ನಂತರ ಕನ್ನಡ ಸಾಹಿತ್ಯ ಪರಿತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ದಿನಾಂಕವನ್ನು ಪ್ರಕಟಿಸಿದರು.

ಈ ಸಾಹಿತ್ಯ ಸಮ್ಮೇಳನ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯಲಿದೆ. ಈ ತಿಂಗಳೊಳಗೆ ಪರಿಷತ್ತಿನ ಕಾರ್ಯಕಾರಿಣಿ ಸಭೆಯನ್ನು ಕರೆದು ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಲಾಗುವುದು ಎಂದು ಬಳಿಗಾರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಮುಂದಾಳತ್ವದಲ್ಲಿ ಈ ಸಮ್ಮೇಳನ ನಡೆಯಲಿರುವುದು ಹಾಗೂ ಕಾರಜೋಳ ಅವರಿಗೆ ಮುಧೋಳ ಸಾಹಿತ್ಯ ಸಮ್ಮೇಳನದ ಉಸ್ತುವಾರಿ ವಹಿಸಿರುವ ಅನುಭವ ಇರುವುದರಿಂದ ಇನ್ನೆರಡು ತಿಂಗಳೊಳಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸವನ್ನು ಸಾಹಿತ್ಯ ಪರಿಷತ್ ನ ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.

ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಸಮಸ್ಯೆಗಳು ಮತ್ತು ಪರಿಹಾರಗಳು, ದಲಿತ ಬಂಡಾಯ ಸಾಹಿತ್ಯ, ನೈಸರ್ಗಿಕ ವಿಕೋಪ ತಡೆಯುವಿಕೆ ಸೇರಿದಂತೆ ಇನ್ನೂ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಗೋಷ್ಠಿಗಳಿರಲಿವೆ ಎಂದು ಮನು ಬಳಿಗಾರ್ ಅವರು ವಿವರಣೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಬಿ ಶರತ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕ್ರಣ್ಣ ವಣಿಕ್ಯಾಳ, ಜಿಲ್ಲಾ ಪಂಚಾಯತ ಸಿಇಓ ಡಾ.ಪಿ.ರಾಜಾ, ಕಸಾಪ ಕೇಂದ್ರ ಸಮಿತಿಯ ಸಂಚಾಲಕ ಎನ್.ಕೆ. ನಾರಾಯಣ, ಜಿಲ್ಲಾ ಕಸಾಪ ಅಧ್ಯಕ್ಷ ವೀರಭ್ರ ಸಿಂಪಿ, ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಚೆನ್ನಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Comments are closed.