ಕರ್ನಾಟಕ

ಟ್ರಬಲ್ ಶೂಟರ್ ಕೆಪಿಸಿಸಿ ಅಧ್ಯಕ್ಷ ಹುದ್ದೆ ತಿರಸ್ಕರಿಸಿದ್ದರ ಹಿಂದಿನ ರಹಸ್ಯವೇನು?

Pinterest LinkedIn Tumblr


ಬೆಂಗಳೂರು (ನ. 10): ದಾಖಲೆರಹಿತ ಹಣ ಹೊಂದಿರುವ ಆರೋಪದಲ್ಲಿ ಇಡಿ ಅಧಿಕಾರಗಳಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ತಿಹಾರ್ ಜೈಲಿಂದ ಹೊರಬಂದ ಮೇಲೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮತ್ತೆ ಸಕ್ರಿಯ ರಾಜಕಾರಣದತ್ತ ವಾಪಾಸಾಗುತ್ತಿರುವ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಮತ್ತೆ ಹಿಡಿತ ಸಾಧಿಸಲು ತಂತ್ರ ರೂಪಿಸಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಕೆಪಿಸಿಸಿ ಸಾರಥ್ಯ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿದೆ. ಆದರೆ ಡಿಕೆಶಿ ಮಾತ್ರ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಡ ಎಂದು ನಿರಾಕರಿಸಿದ್ದಾರೆ. ರಾಜ್ಯದ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಕೆಪಿಸಿಸಿ ಹುದ್ದೆ ಮಹತ್ವದ್ದೇ. ಆದರೆ, ಈ ಹುದ್ದೆಯನ್ನು ಡಿಕೆಶಿ ನಿರಾಕರಿಸಿದ್ದಾರೆ. ಕೆಪಿಸಿಸಿ ಹಾಲಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಬದಲು ಡಿಕೆಶಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಹೈಕಮಾಂಡ್ ನಿರ್ಧರಿಸಿದ್ದರೂ ಡಿಕೆಶಿ ಮಾತ್ರ ಬೇಡ ಎನ್ನುತ್ತಿರುವ ಹಿಂದೆ ದೊಡ್ಡ ಕಾರಣವೇ ಇದೆ.

ಈಗ ಡಿಕೆಶಿ ನಡೆಸಿದ ರಹಸ್ಯ ಸಭೆಯ ಮಾಹಿತಿ ಲಭ್ಯವಾಗಿದೆ. ಜೈಲಿಂದ ಬಂದಮೇಲೆ ಡಿಕೆಶಿ ರಹಸ್ಯವಾಗಿ ಸಭೆ ನಡೆಸಿದ್ದಾರೆ. ಸುಮಾರು 1 ಗಂಟೆಗಳ ಕಾಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಡಿಕೆಶಿ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ದಿನೇಶ್ ಗುಂಡೂರಾವ್ ಜೊತೆ ಚರ್ಚಿಸಿರುವ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ನೀವೇ ಮುಂದುವರೆಯಿರಿ. ಹೈಕಮಾಂಡ್ ಹೇಳಿದರೂ ನನಗೆ ಆ ಹುದ್ದೆ ಬೇಡ ಎಂದಿದ್ದಾರೆ. ಡಿಕೆಶಿ ಮಾತು ಕೇಳಿ ದಿನೇಶ್ ಗುಂಡೂರಾವ್ ಆಶ್ಚರ್ಯಚಕಿತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಡ ಅಂತಿರೋದು ಡಿಕೆಶಿನ ಎಂದು ದಿನೇಶ್ ಗುಂಡೂರಾವ್ ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲು ಡಿಕೆಶಿ ಇಟ್ಟ ಬೇಡಿಕೆಯೇನು?:

ನನಗೆ ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಡ. ವಿಧಾನಸಭೆ ಚುನಾವಣೆ ಹತ್ತಿರ ಇದ್ದಾಗ ಜವಾಬ್ದಾರಿಯನ್ನು ನನಗೆ ಬಿಟ್ಟುಕೊಡಿ ಸಾಕು. ನನ್ನ ನೇತೃತ್ವದಲ್ಲೇ ಮುಂಬರಲಿರೋ ವಿಧಾನಸಭೆ ಚುನಾವಣೆ ಎದುರಿಸುತ್ತೇನೆ. ಅಲ್ಲಿವರೆಗೂ ನೀವು ಅಧ್ಯಕ್ಷರಾಗಿ ಮುಂದುವರೆಯಿರಿ. ಯಾವುದೇ ಟೆನ್ಷನ್ ಇಲ್ಲದೆ ಆರಾಮವಾಗಿ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗಿ. ಹೈಕಮಾಂಡ್​ಗೂ ಇದೇ ಮಾತನ್ನು ಹೇಳಿದ್ದೇನೆ. ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ನಾನು ಈಗ ಜಾಮೀನಿನ ಮೇಲೆ ಹೊರಗಿದ್ದೇನೆ. ಐಟಿ, ಇಡಿ ಕೇಸಲ್ಲಿ ಹೈರಾಣಾಗಿ ಹೋಗಿದ್ದೇನೆ. ಈಗ ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧವಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಸಮಸ್ಯೆಗಳೆಲ್ಲ ಬಗೆಹರಿಯಬೇಕಾಗಿದೆ. ನಾನೀಗ ರಾಜ್ಯ ಸುತ್ತಿ ಸಂಘಟನೆ ಮಾಡೋ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ ನೀವೇ ಮುಂದುವರೆಯಿರಿ. ಎಲೆಕ್ಷನ್ ಟೈಮ್ ಬಂದಾಗ ಬಿಟ್ಟುಕೊಡಿ ಎಂದಿರುವ ಡಿಕೆಶಿ ಮಾತಿಗೆ ದಿನೇಶ್ ಗುಂಡೂರಾವ್ ಕೂಡ ಒಪ್ಪಿದ್ದಾರೆ. ವಿಧಾನಸಭೆ ಚುನಾವಣೆ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲೆ ನಡೆಯಲಿದೆ. ಅದಕ್ಕೆ ನೂರಾರು ಕೋಟಿ ದುಡ್ಡು ಬೇಕು.

ಪಾರ್ಟಿ ಅಧ್ಯಕ್ಷರಾದವರು ಪ್ರಬಲ ಜಾತಿಗೂ ಸೇರಿರಬೇಕು. ಡಿಕೆಶಿ ಹಣನೂ ಖರ್ಚು ಮಾಡ್ತಾರೆ. ಬೆನ್ನಿಗೆ ಪ್ರಬಲ ಒಕ್ಕಲಿಗ ಜಾತಿ ಎಂಬ ಬ್ರಾಂಡ್ ಇದೆ. ಇದೇ ಕಾರಣಕ್ಕೆ ಡಿಕೆಶಿ ಕಂಡಿಷನ್ ಗೆ ದಿನೇಶ್ ಗುಂಡೂರಾವ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

Comments are closed.