ಕರ್ನಾಟಕ

ಮಂಗಗಳ ಹಾವಳಿ ತಡೆಗಟ್ಟಲು ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ‘ಮಂಕಿ ಪಾರ್ಕ್‌’ ಶ್ರೀಘ್ರದಲ್ಲೇ ಸ್ಥಾಪನೆ.

Pinterest LinkedIn Tumblr

ಬೆಂಗಳೂರು : ಶಿವಮೊಗ್ಗ ಜಿಲ್ಲೆಯಲ್ಲಿ ‘ಮಂಕಿ ಪಾರ್ಕ್‌’ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಮಂಗಗಳ ಹಾವಳಿ ತಡೆಗಟ್ಟಲು ಪ್ರಾಯೋಗಿಕವಾಗಿ ಮಂಕಿ ಪಾರ್ಕ್ ಸ್ಥಾಪನೆಯಾಗಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಗಳನ್ನು ಸಂರಕ್ಷಿಸಲು ಪ್ರತ್ಯೇಕ ಉದ್ಯಾನವನ ನಿರ್ಮಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ್ ಬಂಗಾರಪ್ಪ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಹೊಸನಗರ ತಾಲೂಕಿನ ನಿಟ್ಟೂರಿನ ನಾಗೋಡಿ ಗ್ರಾಮದಲ್ಲಿ 100 ಎಕರೆಯಲ್ಲಿ ಪ್ರಾಯೋಗಿಕ ಮಂಕಿ ಪಾರ್ಕ್ ನಿರ್ಮಾಣವಾಗಲಿದೆ. ಈ ಮಂಕಿ ಪಾರ್ಕ್‌ ಯೋಜನೆ ಯಶಸ್ವಿಯಾದರೆ ಉಳಿದ ಜಿಲ್ಲೆಗಳಲ್ಲೂ ಮಾಡಲು ಸರ್ಕಾರ ಚಿಂತಿಸಿದೆ.

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, ‘ಮಂಗಗಳ ಹಾವಳಿಯಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮನೆಗಳಿಗೂ ಮಂಗಗಳು ನುಗ್ಗಿ ಹೆಂಚುಗಳನ್ನು ಒಡೆದು ಹಾಕುತ್ತಿವೆ” ಎಂದರು.

“ಮಂಗಗಳಿಂದ ಬೆಳೆ ಸಂರಕ್ಷಿಸಲು ಶಾಶ್ವತ ಯೋಜನೆ ರೂಪಿಸಬೇಕು. ಇದಕ್ಕಾಗಿ ಮಂಗಗಳ ಪಾರ್ಕ್ ನಿರ್ಮಾಣವಾಗಬೇಕು. ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ಪಾರ್ಕ್ ನಿರ್ಮಿಸಿ, ಮಂಗಗಳಿಗೆ ಬೇಕಾದ ಆಹಾರ ನೀಡಬೇಕು. ಕೋತಿಗಳು ತಿನ್ನುವ ಹಣ್ಣಿನ ಗಿಡಗಳನ್ನು ಬೆಳೆಸಬೇಕು” ಎಂದು ಸಲಹೆ ನೀಡಿದರು.

ಹಿಮಾಚಲ ಪ್ರದೇಶದಲ್ಲಿ ಮಂಕಿ ಪಾರ್ಕ್ ಇದೆ. ಅದರ ಬಗ್ಗೆ ಅಧ್ಯಯನ ನಡೆಸುತ್ತೇವೆ ಎಂದು ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು. ‘100 ಎಕರೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಪಾರ್ಕ್ ಸ್ಥಾಪನೆ ಮಾಡಿ, ಇಲ್ಲೇ ಅಧ್ಯಯನ ಮಾಡಿ. ಯಶಸ್ವಿಯಾದರೆ ಬೇರೆ ಜಿಲ್ಲೆಯಲ್ಲಿ ಮಾಡೋಣ” ಎಂದು ಯಡಿಯೂರಪ್ಪ ಸೂಚನೆ ನೀಡಿದರು.

Comments are closed.