
ಬೆಂಗಳೂರು(ಅ. 24): ಇವತ್ತು ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಯ ಜೊತೆಗೆ ದೇಶಾದ್ಯಂತ 51 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ತುಸು ಹಿನ್ನಡೆಯಾಗಿದೆ. 51 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತದರ ಮಿತ್ರಪಕ್ಷಗಳು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ ಅಂಡ್ ಟೀಮ್ 12 ಕ್ಷೇತ್ರಗಳಲ್ಲಿ ಜಯ ಗಳಿಸಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 11 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಕೂಟ ಎಂಟರಲ್ಲಿ ಜಯ ಗಳಿಸಿದೆ. ಇದರಲ್ಲಿ ಅಪ್ನಾ ದಳ್ ಪಕ್ಷಕ್ಕೆ ಒಂದು ಸ್ಥಾನ ದಕ್ಕಿರುವುದೂ ಸೇರಿದೆ. ಸಮಾಜವಾದಿ ಪಕ್ಷ 2 ಸ್ಥಾನ ಗೆದ್ದರೆ, ಬಿಎಸ್ಪಿ ಒಂದಕ್ಕೆ ತೃಪ್ತಿ ಪಟ್ಟಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಈ 11 ಕ್ಷೇತ್ರಗಳಲ್ಲಿ ಒಂಬತ್ತರಲ್ಲಿ ಗೆದ್ದಿದ್ದ ಬಿಜೆಪಿಗೆ ಈಗ ಒಂದು ಸ್ಥಾನದ ನಷ್ಟವಾಗಿದೆ.
ಕೇಸರೀ ಪಾಳಯದ ಭದ್ರಕೋಟೆಯಾದ ಗುಜರಾತ್ ರಾಜ್ಯದ 6 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮಿಂಚಿದೆ. ಕೈ ಪಾಳಯ 3 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ. ಬಿಜೆಪಿ ಸಿಕ್ಕಿದ್ದು 3 ಮಾತ್ರ. ಕಾಂಗ್ರೆಸ್ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಅಲ್ಪೇಶ್ ಠಾಕೂರ್ ಸೋಲನುಭವಿಸಿದ್ದಾರೆ. ಪಂಜಾಬ್, ಮಧ್ಯ ಪ್ರದೇಶ, ಛತ್ತೀಸ್ಗಡ, ಪುದುಚೆರಿ ರಾಜ್ಯಗಳ ಉಪಚುನಾವಣೆಯಲ್ಲಿ ಕೈ ಪಾಳಯ ಸ್ವೀಪ್ ಮಾಡಿದೆ.
ತಮಿಳುನಾಡಿನ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವೇ ಗೆಲುವು ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಅಸ್ಸಾಮ್ ಮತ್ತು ಹಿಮಾಚಲ ಪ್ರದೇಶಗಳಲ್ಲೂ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಗೆದ್ದಿದೆ.
ಉಪಚುನಾವಣೆಯಾಗುತ್ತಿರುವ ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರವನ್ನು ಎನ್ಸಿಪಿ ಗೆದ್ದರೆ, ಬಿಹಾರದ ಸಮಷ್ಟಿಪುರ ಲೋಕಸಭಾ ಕ್ಷೇತ್ರದಲ್ಲಿ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಜಯಿಸಿದ್ದಾರೆ.
ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ವಿವರ:
ಒಟ್ಟು ವಿಧಾನಸಭಾ ಕ್ಷೇತ್ರಗಳು 51
ಬಿಜೆಪಿ+ 22
ಕಾಂಗ್ರೆಸ್+ 12
ಇತರೆ 17
ಲೋಕಸಭಾ ಉಪಚುನಾವಣೆ ಫಲಿತಾಂಶ:
ಒಟ್ಟು ಕ್ಷೇತ್ರಗಳು: 2
(ಎನ್ಸಿಪಿ 1, ಎಲ್ಜೆಪಿ 1)
ಉಪಚುನಾವಣೆ ಫಲಿತಾಂಶ: ರಾಜ್ಯವಾರು ವಿವರ:
ಉತ್ತರ ಪ್ರದೇಶ: 11 (ಎನ್ಡಿಎ 8, ಬಿಎಸ್ಪಿ 1, ಎಸ್ಪಿ 2)
ಗುಜರಾತ್: 6 (ಬಿಜೆಪಿ 3, ಕಾಂಗ್ರೆಸ್ 3)
ಕೇರಳ: 5 (ಯುಡಿಎಫ್ 2, ಎಲ್ಡಿಎಫ್ 2, ಮುಸ್ಲಿಂ ಲೀಗ್ 1)
ಬಿಹಾರ: 5 (ಜೆಡಿಯು 1, ಆರ್ಜೆಡಿ 2, ಇತರೆ 2)
ಅಸ್ಸಾಮ್: 4 (ಬಿಜೆಪಿ 3, ಇತರೆ 1)
ಪಂಜಾಬ್: 4 (ಕಾಂಗ್ರೆಸ್ 3, ಎಸ್ಎಡಿ 1)
ಸಿಕ್ಕಿಮ್: 3 (ಬಿಜೆಪಿ 2, ಇತರೆ 1)
ಹಿಮಾಚಲ ಪ್ರದೇಶ: 2 (ಬಿಜೆಪಿ 2)
ರಾಜಸ್ಥಾನ: 2 (ಕಾಂಗ್ರೆಸ್ 1, ಇತರೆ 1)
ತಮಿಳುನಾಡು: 2 (ಎಐಎಡಿಎಂಕೆ 2)
ಅರುಣಾಚಲ ಪ್ರದೇಶ: 1 (ಪಕ್ಷೇತರ 1)
ಮಧ್ಯ ಪ್ರದೇಶ: 1 (ಕಾಂಗ್ರೆಸ್)
ಮೇಘಾಲಯ: 1 (ಯುಡಿಪಿ)
ಒಡಿಶಾ: 1 (ಬಿಜೆಡಿ)
ಛತ್ತೀಸ್ಗಡ: 1 (ಕಾಂಗ್ರೆಸ್)
ತೆಲಂಗಾಣ: 1 (ಟಿಆರ್ಎಸ್ 1)
ಪುದುಚೇರಿ: 1 (ಕಾಂಗ್ರೆಸ್ 1)
ಲೋಕಸಭೆ ಉಪಚುನಾವಣೆ:
ಮಹಾರಾಷ್ಟ್ರ: 1 (ಎನ್ಸಿಪಿ 1)
ಬಿಹಾರ: 1 (ಎನ್ಡಿಎ 1)
Comments are closed.