ಕರ್ನಾಟಕ

ರಾಯಚೂರಿನಲ್ಲಿ ಪ್ರವಾಹ: ರೆಡ್ ಅಲರ್ಟ್ ಘೋಷಣೆ, ಜನರ ರಕ್ಷಣೆಗೆ ದಾವಿಸಿದ ಸೇನೆ

Pinterest LinkedIn Tumblr


ರಾಯಚೂರು: ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹದ ಹೊಡೆತದಿಂದ ಚೇತರಿಸಿಕೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಜನ ಮತ್ತೊಂದು ಪ್ರವಾಹಕ್ಕೆ ತುತ್ತಾಗಿದ್ದಾರೆ.

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣಪುರ ಹಾಗೂ ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಬಿಡಲಾಗಿದೆ. ಇದರಿಂದ ರಾಯಚೂರು ಜಿಲ್ಲೆಯ ಸುಮಾರು 26 ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಯಾದಗಿರಿ ಜಿಲ್ಲೆಯ ಕೊಳ್ಳೂರು ಸೇತುವೆ, ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದ್ದು ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಕೃಷ್ಣಾ ಮತ್ತು ತುಂಗಭದ್ರಾ ನದಿ ಸಮೀಪ ತೆರಳದಂತೆ ನದಿ ಪಾತ್ರದ ಗ್ರಾಮಗಳ ಜನತೆಗೆ ಸೂಚಿಸಲಾಗಿದೆ. ಪ್ರವಾಹ ಸಂತ್ರಸ್ತರ ನೆರವಿಗಾಗಿ 40 ಸೇನಾ ಸಿಬ್ಬಂದಿ ಇಂದು ಸಂಜೆ ಜಿಲ್ಲೆಗೆ ಆಗಮಿಸಲಿದ್ದಾರೆ. ದೇವದುರ್ಗ ಮತ್ತು ರಾಯಚೂರು ತಾಲೂಕಿನಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಈ ಮಧೆ, ಕೃಷ್ಣಾ ನದಿತೀರದಲ್ಲಿ ದನ ಮೇಯಿಸುವಾಗ ದಿಢೀರ್ ಬಂದ ಪ್ರವಾಹದಲ್ಲಿ ಸೋಮವಾರ ಕೊಚ್ಚಿಹೋಗಿದ್ದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ 14 ವರ್ಷದ ಬಾಲಕ ಸಂತೋಷ ಇಂದು ಶವವಾಗಿ ಪತ್ತೆಯಾಗಿದ್ದು, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

Comments are closed.