ಕರ್ನಾಟಕ

ಕಾಲೇಜಿನ ಪ್ರಿನ್ಸಿಪಾಲರ ಕಿರುಕುಳಕ್ಕೆ ಮನನೊಂದು ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು (ಅಕ್ಟೋಬರ್ 21); ಕಾಲೇಜಿನ ಪ್ರಾಂಶುಪಾಲ ನಿರಂತರವಾಗಿ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಯೊಬ್ಬ ಡೆತ್​ನೋಟ್​ ಬರೆದಿಟ್ಟು ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಸವನ ಹಳ್ಳಿಯ ಬಳಿ ಇರುವ ಅಮೃತ ಕಾಲೇಜಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ಆಂಧ್ರಪ್ರದೇಶ ಮೂಲದ ಶ್ರಿ ಹರ್ಷ ಎಂದು ಗುರುತಿಸಲಾಗಿದೆ.

ಅಮೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಶ್ರೀ ಹರ್ಷ ಕಾಲೇಜಿನ ಹಾಸ್ಟಲ್ ನಲ್ಲಿ ಊಟದ ವ್ಯವಸ್ಥೆ ಸರಿಯಿಲ್ಲ ಮತ್ತು ಸರಿಯಾಗಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಒಂದು ತಿಂಗಳ ಹಿಂದೆಯೇ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಕಾರಣಕ್ಕೆ ಕಾಲೇಜಿನ ಆಡಳಿತ ಮಂಡಳಿ ಶ್ರೀ ಹರ್ಷ ಸೇರಿದಂತೆ 20 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಿತ್ತು.

ಈ ನಡುವೆ ಮೊದಲೇ ಕ್ಯಾಂಪಸ್ ಸೆಲೆಕ್ಷನ್ ಆಗಿ ನೌಕರಿ ಗಿಟ್ಟಿಸಿದ್ದ ಶ್ರೀ ಹರ್ಷ ಅವರಿಗೆ ಕಂಪೆನಿಯೊಂದು ವಾರ್ಷಿಕ 14 ಲಕ್ಷ ಸಂಬಳ ಅಫರ್ ಮಾಡಿತ್ತು. ಅಲ್ಲದೆ, ಇಂದು ಆಫರ್ ಲೆಟರ್ ಅನ್ನು ಕಾಲೇಜಿನ ವಿಳಾಸಕ್ಕೆ ಕಳುಹಿಸಿದೆ. ಆದರೆ, ಶ್ರಿ ಹರ್ಷ ಸಸ್ಪೆಂಡ್ ಆಗಿದ್ದಾನೆ ಎಂಬ ಕಾರಣಕ್ಕೆ ಪ್ರಾಂಶುಪಾಲ “ನೀನು ಸಸ್ಪೆಂಡ್ ಆಗಿದ್ದೀಯ” ಎಂದು ನಿಂದಿಸಿ ಅವರ ಆಫರ್ ಲೆಟರ್ ಅನ್ನು ಹರಿದು ಹಾಕಿದ್ದಾರೆ.

ನಮ್ಮ ಭವಿಷ್ಯ ಹಾಳಾಗುತ್ತೆ ಎಂದು ಮನವಿ ಮಾಡಿದರೂ ಸಹ ಕೇಳದೆ ಆಫರ್ ಲೆಟರ್ ಹರಿದು ಹಾಕಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿ ಶ್ರೀ ಹರ್ಷ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Comments are closed.