ಕರ್ನಾಟಕ

ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸೂಚನೆ

Pinterest LinkedIn Tumblr


ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಲಭ್ಯವಾಗುವ ಸಾವಿರಾರು ಕೋಟಿ ರೂ. ಅನುದಾನ ಸಹ ಬಳಸಿಕೊಳ್ಳುತ್ತಿಲ್ಲ. ಇಂತಹ ವರ್ತನೆ ಸಹಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಂತ ಉತ್ತಮವಾಗಿ ಸೇವೆ ನೀಡಬಹುದು. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಅನುದಾನ ಲಭ್ಯತೆ ಹಾಗೂ ಬಳಕೆ ಕುರಿತು ಆರೋಗ್ಯಾಧಿಕಾರಿಗಳ ಬಳಿ ಮಾಹಿತಿ ಇಲ್ಲದ ಬಗ್ಗೆ ಸಿಡಿಮಿಡಿಗೊಂಡ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳ ನಿರಾಸಕ್ತಿಯಿಂದ ಅನುದಾನ ಬಳಕೆಯಾಗುತ್ತಿಲ್ಲ. ರಾಜ್ಯದ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ವಾಸ್ತವ್ಯ ಮಾಡಿದಾಗ ಅಲ್ಲಿನ ಸ್ಥಿತಿಗತಿ ಗೊತ್ತಾಗುತ್ತಿದೆ. ಕೆಲವೆಡೆ ವೈದ್ಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ತಳ ಹಂತದ ಸಿಬ್ಬಂದಿಗಳ ಅಸಹಕಾರ ಇದೆ. ಇದರಿಂದ ಜನರು ಸಮಸ್ಯೆಪಡುವಂತಾಗಿದೆ ಎಂದು ಹೇಳಿದರು.

ತಳಹಂತದ ಸಿಬ್ಬಂದಿ ಸಹಕಾರ ಅಗತ್ಯ. ಆರೋಗ್ಯ, ಶಿಕ್ಷಣ, ಆಹಾರ, ಪೊಲೀಸ್‌, ಸಾರಿಗೆ, ಕಂದಾಯ ಇಲಾಖೆ ಸೇವೆಗಳು ಜನಸಾಮಾನ್ಯರಿಗೆ ನಿತ್ಯ ತಲುಪುವಂತದ್ದು. ಇದೊಂದು ರೀತಿಯಲ್ಲಿ ದೇವರ ಕೆಲಸ ಎಂದು ಭಾವಿಸಬೇಕು ಎಂದು ಕಿವಿಮಾತು ಹೇಳಿದರು.

ವೈದ್ಯರು, ತಜ್ಞ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ನಾನು ಮಂತ್ರಿಯಾಗಿ ಇಲ್ಲಿ ಶಾಶ್ವತವಾಗಿ ಕೂರಲು ಬಂದಿಲ್ಲ, ಅಧಿಕಾರ ಶ್ವಾಶತವೂ ಅಲ್ಲ ಎಂಬುದು ಗೊತ್ತಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಜನರಿಗೆ ಗುಣಮಟ್ಟದ ಸೇವೆ ನೀಡುವ ಹೊಣೆಗಾರಿಕೆ ನಿಮ್ಮ ಮೇಲಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಪ್ರಾತ್ಯಕ್ಷಿಕೆ ಮೂಲಕ ಸಚಿವರಿಗೆ ಮಾಹಿತಿ ನೀಡಿದವು. ಹೆಲಿಕಾಪ್ಟರ್‌ ಆ್ಯಂಬುಲೆನ್ಸ್‌ ಸೇವೆ, ರಸ್ತೆಯಲ್ಲೇ ಸಂಚರಿಸುವ ಆ್ಯಂಬುಲೆನ್ಸ್‌ನಲ್ಲಿ ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌ ಸೌಲಭ್ಯ ಒದಗಿಸುವ ಕುರಿತು ವಿವರಿಸಿದವು.

Comments are closed.