ಕರ್ನಾಟಕ

ದತ್ತಮಾಲಾ ಅಭಿಯಾನ ಮುಕ್ತಾಯ; ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೆರವಣಿಗೆ

Pinterest LinkedIn Tumblr


ಚಿಕ್ಕಮಗಳೂರು(ಅ. 13): ಒಂದೆಡೆ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡ್ತಿರೋ ದತ್ತ ಭಕ್ತರು… ಇನ್ನೊಂದೆಡೆ ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆಯಲ್ಲಿ ಸಾಗ್ತಿರೋ ದತ್ತಮಾಲಾಧಾರಿಗಳು… ದತ್ತಮಾಲಾಧಾರಿಗಳ ಹೆಜ್ಜೆ ಮೇಲೆ ಹದ್ದಿನ ಕಣ್ಣಿಟ್ಟಿರೋ ಪೊಲೀಸರು… ದತ್ತ ಪಾದುಕೆ ದರ್ಶನ ಮಾಡಿಕೊಂಡು ಹೊರಬರುತ್ತಿರುವ ದತ್ತ ಭಕ್ತರು… ಇದು ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಂಡಿದ್ದ ದತ್ತಮಾಲಾ ಅಭಿಯಾನದಲ್ಲಿ ಇಂದು ಕಂಡುಬಂದ ದೃಶ್ಯಗಳು.

ಇಂದು ಚಿಕ್ಕಮಗಳೂರು ನಗರದಲ್ಲಿ ಶೋಭಯಾತ್ರೆ ಆರಂಭಗೊಂಡು ದತ್ತಪೀಠದಲ್ಲಿ ಸಂಪನ್ನಗೊಳ್ಳಬೇಕಾಗಿದ್ದ ದತ್ತಮಾಲಾ ಅಭಿಯಾನ ಪ್ರತಿವರ್ಷದಂತೆ ಕಳೆ ಇರಲಿಲ್ಲ. ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದ್ದು, ಕಾರವಾರದಿಂದ ಬಂದಿದ್ದ ಅದೊಂದು ಕಲ್ಲಿನ ದತ್ತಮೂರ್ತಿ. ಆ ಮೂರ್ತಿಯನ್ನೇ ಇಟ್ಟುಕೊಂಡೇ ನಾವು ಶೋಭಾಯಾತ್ರೆ ಮಾಡ್ತೀವಿ ಅಂತಾ ದತ್ತಮಾಲಾಧಾರಿಗಳು ಹೊರಟಿದ್ದರು. ಆದ್ರೆ ದತ್ತಾತ್ರೇಯ ಮೂರ್ತಿ ಇಟ್ಟುಕೊಂಡು ಶೋಭಾಯಾತ್ರೆ ಮಾಡಿದರೆ ವಿವಾದ ಸೃಷ್ಠಿಯಾಗಬಹುದು ಎನ್ನುವ ಕಾರಣದಿಂದ ಪೊಲೀಸರು ಹಾಗೂ ಜಿಲ್ಲಾಡಳಿತವು ದತ್ತಮೂರ್ತಿ ಇಟ್ಕೊಂಡು ಶೋಭಾಯಾತ್ರೆ ಮಾಡಲು ಸುತಾರಾಂ ಒಪ್ಪಲಿಲ್ಲ. ಕೊನೆಗೆ ಪೊಲೀಸರು ಅಡ್ಡಿಪಡಿಸಿದಾಗ, ದತ್ತ ಮಾಲಾಧಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆಯಲ್ಲಿ ಕುಳಿತು ತಾಳ ಹಾಕುತ್ತಾ ಪ್ರತಿಭಟನೆ ಮಾಡಿದ್ರು. ಇದಕ್ಕೂ ಪೊಲೀಸರು ಜಗ್ಗದಿದ್ದಾಗ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಸುತ್ತಿದ್ದ ಶೋಭಾಯಾತ್ರೆಯನ್ನ ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನವಾಗಿ ನಡೆಸಿದರು. ಸಹಜ ಶೋಭಯಾತ್ರೆಗೆ ಅವಕಾಶ ಮಾಡಿಕೊಡದ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದರು.

ನಗರದ ಬಸವನಹಳ್ಳಿಯ ಶಾರದಾ ಪೀಠದಿಂದ ಆರಂಭವಾದ ಮೌನ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಅಜಾದ್ ಪಾರ್ಕ್ ವೃತ್ತದಲ್ಲಿ ಮುಕ್ತಾಯಗೊಂಡಿತು. ನಂತರ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ಹೋಮ-ಹವನ ನಡೆಸಿ, ದತ್ತಪಾದುಕೆ ದರ್ಶನ ಪಡೆದರು. ಚಿಕ್ಕಮಗಳೂರು, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಿಂದ ಬಂದಿದ್ದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ದತ್ತಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದರು.

ದತ್ತಮಾಲಾ ಅಭಿಯಾನಕ್ಕೆ ನಗರ ಹಾಗೂ ದತ್ತಪೀಠ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 2000 ಕ್ಕೂ ಅಧಿಕ ಸಿಬ್ಬಂದಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇನ್ನು, ಕಾಳಿಮಠದ ಋಷಿಕೇಶ ಸ್ವಾಮೀಜಿ, ಕಾಶ್ಮೀರಿ ಪಂಡಿತ ರಾಹುಲ್ ಕೌರ್ ಸೇರಿದಂತೆ ಶ್ರೀರಾಮಸೇನೆಯ ದತ್ತಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದರು.

ಒಟ್ಟಾರೆ, ಕಳೆದೊಂದು ವಾರದಿಂದ ಕೆಸರಿಮಯವಾಗಿದ್ದ ಚಿಕ್ಕಮಗಳೂರು ಇಂದಿನಿಂದ ಯತಾಸ್ಥಿತಿಗೆ ಮರಳಲಿದೆ. ಪೊಲೀಸರ ಸರ್ಪಗಾವಲಿನಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲಾ ಶಾಂತರೀತಿಯಲ್ಲಿ ಮುಕ್ತಾಯವಾಯ್ತು. ಈ ಬಾರಿ ದತ್ತಾತ್ರೇಯನ ಮೂರ್ತಿ ಇಟ್ಕೊಂಡು ಶೋಭಾಯಾತ್ರೆ ಮಾಡಬೇಕು ಎಂದು ಇಚ್ಚೆ ಪಟ್ಟಿದ್ದ ದತ್ತಭಕ್ತರ ಆಸೆಗೆ ಪೊಲೀಸರು ತಣ್ಣೀರೆರಚಿದರು.

Comments are closed.