ಕರ್ನಾಟಕ

ರಾಸಾಯನಿಕ ಬಳಸದೇ 11 ಎಕರೆಯಲ್ಲಿ ಭತ್ತದ ಸಾವಯವ ಕೃಷಿ: ಉತ್ತಮ ಇಳುವರಿ, ಭರ್ಜರಿ ಡಿಮ್ಯಾಂಡ್

Pinterest LinkedIn Tumblr


ಕೊಪ್ಪಳ: ಡಿಜಿಟಲ್ ಯುಗದಲ್ಲಿ ಎಲ್ಲ ಕೆಲಸಗಳು ಬೇಗ ಆಗಬೇಕು ಅನ್ನೋದು ಎಲ್ಲರ ಆಶಯ. ದುರಂತ ಅಂದರೆ ಡಿಜಿಟಲ್ ವೇಗದಲ್ಲಿ ನಾವು ಸೇವಿಸುವ ಆಹಾರ ಸಹ ವಿಷಕಾರಿ ಆಗುತ್ತಿದೆ. ಇದಕ್ಕೆ ಕಾರಣನೂ ಇದೇ ಫಾಸ್ಟ್ ಎನ್ನುವ ಹೆಸರು. ಬೆಳೆ ಚೆನ್ನಾಗಿರಬೇಕು, ಹೆಚ್ಚು ಉತ್ಪನ್ನ ಬರಬೇಕು ಎಂದು ಬೆಳೆಗಳಿಗೆ ವಿವಿಧ ರಾಸಾಯಾನಿಕ ಸಿಂಪಡಿಸುತ್ತಾರೆ. ಇಂತಹ ರೈತರ ನಡುವೆ ಕೊಪ್ಪಳದ ಗಂಗಾವತಿ ತಾಲೂಕಿನ ಹಗೆದಾಳ ಗ್ರಾಮದ ಸಾವಯವ ಕೃಷಿಕ ದೊಡ್ಡಪ್ಪ ದೇಸಾಯಿ ಭಿನ್ನವಾಗಿ ನಿಲ್ಲುತ್ತಾರೆ.

ದೊಡ್ಡಪ್ಪ ದೇಸಾಯಿ ತಮ್ಮ 11 ಎಕ್ರೆ ಜಮೀನಿನಲ್ಲಿ ರಾಸಾಯನಿಕ ಮುಕ್ತ ಭತ್ತ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಎಕ್ರೆ ಪ್ರದೇಶದಲ್ಲಿ ಭತ್ತ ಬೆಳೆದು ಕಟಾವು ಮಾಡಬೇಕಾದ ಅವಧಿಯೊಳಗೆ ನಾಲ್ಕರಿಂದ ಐದು ಸಾರಿ ರಾಸಾಯನಿಕ ಗದ್ದೆಗಳಿಗೆ ಸಿಂಪಡಿಸಬೇಕು. ಇದಕ್ಕೆ ಸುಮಾರು 20 ರಿಂದ 25 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಈ ಬಳಸುತ್ತಿರುವ ರಾಸಾಯನಿಕ ಅತ್ಯಂತ ವಿಷಕಾರಿ ಎಂದು ಈಗಾಗಲೇ ಕೃಷಿ ವಿಜ್ಞಾನ ಕೇಂದ್ರ ದೃಢಪಡಿಸಿದೆ. ದೊಡ್ಡಪ್ಪ ದೇಸಾಯಿ ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಂಡು ರಾಸಾಯನಿಕ ಬಳಸದೇ ಭತ್ತ ಬೆಳೆದಿದ್ದಾರೆ.

ಮಿತಿಮೀರಿದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಮಣ್ಣಿನ ಆರೋಗ್ಯ ರಕ್ಷಿಸಲು ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ದೊಡ್ಡಪ್ಪ ಅವರ ಸಾಧನೆ ಗುರುತಿಸಿರುವ ಬೆಂಗಳೂರಿನ ಕೃಷಿ ಇಲಾಖೆ ಅಧಿಕಾರಿಗಳ ತಂಡ ಗದ್ದೆಗೆ ಭೇಟಿ ನೀಡಿ ಸಾವಯವ ಪದ್ಧತಿಯಿಂದ ಬೆಳೆದ ಬೆಳೆಯನ್ನು ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಅಧಿಕಾರಿಗಳು ದೊಡ್ಡಪ್ಪ ಅವರ ಜಮೀನಿನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ.

Comments are closed.