ಕರ್ನಾಟಕ

ನಾವು ಯಾವುದೇ ಪರಿಹಾರ ಕಾರ್ಯ ನಿಂತಿಲ್ಲ: ಯಡಿಯೂರಪ್ಪ

Pinterest LinkedIn Tumblr


ಬೆಳಗಾವಿ: ಪ್ರವಾಹದಿಂದ ಉಂಟಾಗಿರುವ ನಷ್ಟದಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ವಿರೋಧಿ ಪಕ್ಷಗಳ ಆರೋಪಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉತ್ತರಿಸಿದ್ದು, ಜನರ ಸಂಕಷ್ಟವನ್ನು ನಿವಾರಿಸುವ ಬಗ್ಗೆ ಕ್ರಮಕೈಗೊಂಡಿದ್ದೇವೆ. ಈಗಾಗಲೇ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದಿಂದ ಅನುದಾನ ಲಭಿಸಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ ಅವರು, ಇಂದು ನಾನು ಜಿಲ್ಲೆಯಲ್ಲಿ ಮಾಧ್ಯಮಗಳ ಎದುರೇ ಸಭೆ ನಡೆಸಿದ್ದು, ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎಂಬ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದೆ. ಈಗಾಗಲೇ ರಾಜ್ಯ ಸರ್ಕಾರ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚು ಹಣವನ್ನು ನಾವು ಬಿಡುಗಡೆ ಮಾಡುತ್ತೇವೆ, ಇದು ನಮ್ಮ ಕರ್ತವ್ಯವಾಗಿದೆ. ಹೆಚ್ಚಿನ ಹಾನಿಯಾದ ಕುರಿತು ವರದಿಯನ್ನ ಮಾಡುತ್ತಿದ್ದೇವೆ. ಹಂತ ಹಂತವಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದರು.

ಈಗಾಗಲೇ ಕೇಂದ್ರದಲ್ಲಿ ಮನವಿ ಸಲ್ಲಿಕೆ ಮಾಡಿದ್ದು, ಕೇಂದ್ರದಿಂದ ಬರುವ ಹಣವನ್ನು ಬೆಳೆ ನಷ್ಟ ಪರಿಹಾರ ಸೇರಿದಂತೆ, ವಿವಿಧ ಭಾಗಗಳಲ್ಲಿ ಹಾನಿಯಾಗಿರುವ ರಸ್ತೆ ಸೇರಿದಂತೆ ಬೃಹತ್ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತೇವೆ. ಅತಿವೃಷ್ಟಿಗೆ ಸಿಕ್ಕಿರುವ ರೈತರಿಗೆ ನ್ಯಾಯ ನೀಡುವುದು ನಮ್ಮ ಕರ್ತವ್ಯ. ನಾನು ರೈತನ ಮಗನೇ ಎಂದರು.

ಈಗಾಗಲೇ ಮನೆ ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆಯ ಫೌಂಡೇಷನ್ ಹಾಕಿಕೊಳ್ಳುವರಿಗೆ 1 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರ ರೂ. ಚೆಕ್‍ಗಳನ್ನು ಬಹುತೇಕರಿಗೆ ನೀಡಿದ್ದೇವೆ. ಪ್ರಧಾನಿ ಮೋದಿ ಹೊರ ದೇಶದಲ್ಲಿರುವುದರಿಂದ ಇದುವರೆಗೂ ಸಭೆ ನಡೆಸಲಾಗಲಿಲ್ಲ. ನೆರೆ ಸಮಸ್ಯೆ ಅನುಭವಿಸಿದ ಯಾವುದೇ ರಾಜ್ಯಕ್ಕೂ ಹಣ ಬಿಡುಗಡೆ ಮಾಡಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರವೇ ಹಣ ಬಿಡುಗಡೆಯಾಗಲಿದೆ ಎಂದರು.

ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕಿತ್ತು, ಸಿಎಂ ಅವರಿಗೆ ತಾಕತ್ತಿಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ತಾಕತ್ತಿನ ಪ್ರಶ್ನೆ ಅಲ್ಲ, ಶಾಂತ ರೀತಿಯಿಂದ ಕೇಂದ್ರದಿಂದ ಅನುದಾನ ಪಡೆದುಕೊಳ್ಳುವುದಾಗಿದೆ. ಕಾಂಗ್ರೆಸ್ ಪಕ್ಷದವರು ಹೇಗೆ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರಾ ಎಂಬುದನ್ನ ನನ್ನ ಬಾಯಿಂದ ಹೇಳಲು ನಾನು ಸಿದ್ಧವಾಗಿಲ್ಲ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ ಅದಕ್ಕೆ ನಾನು ವಿರೋಧ ಮಾಡುವುದಿಲ್ಲ. ಮೂರು ದಿನ ಅಧಿವೇಶನ ಕರೆದಿದ್ದೇವೆ ಅಲ್ಲಿ ಈ ಚರ್ಚೆಯಾಗಲಿ. ಕೇಂದ್ರಕ್ಕೆ ಯಾವುದೇ ನಿಯೋಗ ಕರೆದುಕೊಂಡು ಹೋಗುವ ಅಗತ್ಯವಿಲ್ಲ. 2-3 ದಿನಗಳಲ್ಲಿ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದರು.

ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಬೆಳಗ್ಗೆ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬಂದು ಉಪಾಹಾರ ಸೇವಿಸಿ ಹೋಗಿದ್ದಾರೆ. ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಎಂದು ನಮ್ಮ ಬಾಯಿಂದ ಹೇಳಿಸಬೇಡಿ ಎಂದರು.

ನೆರೆ ಸಮಸ್ಯೆಯನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಪ್ರತಿಕ್ರಮವನ್ನು ಜನರ ಕಣ್ಣ ಮುಂದಿಡುತ್ತೇವೆ. ಬೆಳೆ ನಾಶವಾಗಿದ್ದರೆ ಹೆಕ್ಟರ್ ಗೆ ಆರೂವರೆ ಸಾವಿರ, ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಯಾದರೆ ಹೆಕ್ಟರ್ ಗೆ ಹನ್ನೆರಡು ಸಾವಿರ ನೀಡುತ್ತೇವೆ. ಪ್ರತಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಹಣವನ್ನು ನೀಡುತ್ತಿದ್ದು, ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಅಲ್ಲದೇ ಮಳೆಯಿಂದ ಶಾಲಾ ಕಟ್ಟಡಕ್ಕೆ ಹಾನಿಯಾಗಿದ್ದಾರೆ ಹೊಸ ಕಟ್ಟಡ ನಿರ್ಮಾಣ ಮಾಡಲು 5 ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಕೆಇಬಿ ಇಲಾಖೆಗೂ ಕೂಡ ಜಿಲ್ಲೆಯಲ್ಲಿ ನಡೆಯಬೇಕಾದ ಕ್ರಮಗಳನ್ನು ಶೀಘ್ರ ಪೂರ್ಣಗೊಳಿಸಲು ಆದೇಶ ನೀಡಿದ್ದೇನೆ ಎಂದು ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಉತ್ತರಿಸಿದರು.

Comments are closed.