
ಬೆಂಗಳೂರು: ನಿನಗಿರುವ ಸರ್ಪದೋಷ ನಿವಾರಿಸುತ್ತೇನೆ… ನಿನ್ನ ಗುಪ್ತಾಂಗದಲ್ಲಿ ದೋಷವಿದೆ… ಅದನ್ನು ಸರಿಪಡಿಸಲು ನೀನು ನನ್ನಿಂದ 5 ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು… ನನ್ನ ಜತೆ 5 ಬಾರಿ ಸೆಕ್ಸ್ ಮಾಡಬೇಕು… ಅಷ್ಟೇ ಅಲ್ಲ, ನನ್ನ ಮಗನೊಂದಿಗೂ ಸಹಕರಿಸಬೇಕು ಎಂದು ಯುವತಿಗೆ ಹೇಳಿದ್ದ ಕಾಮಿಸ್ವಾಮಿಯೊಬ್ಬ ಬಂಧನ ಭೀತಿಯಲ್ಲಿ ಕಾಲ್ಕಿತ್ತಿದ್ದರೆ ಆತನ ಪುತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಗಣೇಶ್ ಪರಾರಿಯಾಗಿರುವ ಸ್ವಾಮಿ. ಈತನ ಪುತ್ರ ಮಣಿಕಂಠ ಸಿಕ್ಕಿಬಿದ್ದಿರುವವ. ಬಾಣಸವಾಡಿಯ ಕಂಪನಿಯೊಂದರಲ್ಲಿ ಯುವತಿಯೊಬ್ಬರು ಮಾನವಸಂಪನ್ಮೂಲ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಏನೋ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸಲಹೆ ಕೇಳಲೆಂದು ಗಣೇಶ್ನನ್ನು ಸಂಪರ್ಕಿಸಿದ್ದರು.
ಅದಕ್ಕೆ ಆತ ನಿಮಗೆ ಸರ್ಪದೋಷವಿದ್ದು ಅದನ್ನು ಪರಿಹರಿಸಲು ಪೂಜೆ ಮಾಡಬೇಕಿದೆ ಎಂದು ಹೇಳಿ ಶನಿವಾರ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆಯವರೆಗೆ ನಿರಂತರವಾಗಿ ಪೂಜೆ ಮಾಡಿದ್ದ. ಈ ಕೈಂಕರ್ಯಕ್ಕೆ ಆತನ ಪುತ್ರ ಮಣಿಕಂಠ ಸಹಕರಿಸಿದ್ದ.
ಪೂಜೆ ಮುಗಿದ ಬಳಿಕ ಪೂಜೆ ಮಾಡಿದ್ದ ವಸ್ತುಗಳನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದ. ಆತನ ಮಾತು ನಂಬಿದ ಯುವತಿ ಶನಿವಾರ ರಾತ್ರಿಯೇ ಆತನೊಂದಿಗೆ ಕುಟುಂಬದವರ ಜತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದರು. ಕುಕ್ಕೆಯಲ್ಲಿ ಎರಡು ಪ್ರತ್ಯೇಕ ಕೋಣೆಗಳನ್ನು ಮಾಡಿದ ಬಳಿಕ ಯುವತಿ ಜತೆ ಕಾಮದಾಟವಾಡಲು ಗಣೇಶ್ ಹುನ್ನಾರ ನಡೆಸಿದ್ದ ಎನ್ನಲಾಗಿದೆ.
ಈ ಹಂತದಲ್ಲಿ ಯುವತಿಯ ಗುಪ್ತಾಂಗದಲ್ಲಿ ದೋಷವಿದೆ ಎಂದು ಹೇಳಿ ಅಸಲಿ ಆಟ ಶುರುವಿಟ್ಟುಕೊಂಡಿದ್ದ. ನನ್ನಿಂದ 5 ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು… 5 ಬಾರಿ ಕಾಮದಾಟ ಅಡಬೇಕು… ಅಷ್ಟೇ ಅಲ್ಲ ನನ್ನ ಪುತ್ರನ ಜತೆಯೂ ದೇಹ ಹಂಚಿಕೊಳ್ಳಬೇಕು… ಎಂದು ಪುಸಲಾಯಿಸಿದ್ದ. ಅಲ್ಲದೆ, ಈ ಸಂಗತಿಯನ್ನು ಯಾವುದೇ ಕಾರಣಕ್ಕೂ ಪಾಲಕರಿಗೆ ತಿಳಿಸದಂತೆ ಯುವತಿಗೆ ತಾಕೀತು ಮಾಡಿದ್ದ.
ಹೆದರಿದ ಯುವತಿ, ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರು ತಲುಪಿಕೊಂಡಿದ್ದರು. ಆನಂತರ ಬಾಣಸವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಅದರಂತೆ ಗಣೇಶ್ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಮಣಿಕಂಠನನ್ನು ಬಂಧಿಸಿದ್ದಾರೆ. ಗಣೇಶ್ ಸದ್ಯ ತಲೆಮರೆಸಿಕೊಂಡಿದ್ದಾನೆ.
Comments are closed.