ಕರ್ನಾಟಕ

ಕೊನೆಗೂ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಇಸ್ರೋ; ಆದಷ್ಟು ಬೇಗ ಸಂಪರ್ಕ ಸಾಧಿಸಲಾಗುವುದು: ಶಿವನ್

Pinterest LinkedIn Tumblr

ಬೆಂಗಳೂರು: ಚಂದ್ರಯಾನ-2ರ ಮಹತ್ವದ ಘಟ್ಟದಲ್ಲೇ ಹಿನ್ನಡೆ ಅನುಭವಿಸಿದ್ದ ಇಸ್ರೋ, ಕೊನೆಗೂ ವಿಕ್ರಮ್ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಚಂದಿರನ ಅಂಗಳದಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‌ನ ಚಿತ್ರಗಳು ಇಸ್ರೋಗೆ ಲಭ್ಯವಾಗಿವೆ. ಚಂದ್ರನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿರುವ ಆರ್ಬಿಟರ್, ವಿಕ್ರಮ್ ಲ್ಯಾಂಡರ್‌ನ ಛಾಯಾಚಿತ್ರಗಳನ್ನು ಬೆಂಗಳೂರಿನ ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಿದೆ.

ನಾಲ್ಕು ಕಾಲುಗಳನ್ನು ಹೊಂದಿರುವ ವಿಕ್ರಮ್ ಲ್ಯಾಂಡರ್, ಚಂದ್ರನ ಮೇಲೆ ಇಳಿದಿರೋದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ. ವಿಕ್ರಮ್ ಲ್ಯಾಂಡರ್ ನೆಲೆ ನಿಂತಿರುವ ಫೋಟೋಗಳನ್ನು ಆರ್ಬಿಟರ್ ಸೆರೆ ಹಿಡಿದಿದೆ. ಇದೀಗ ನಮಗೆ ಸಿಕ್ಕಿರುವ ಫೋಟೋ ಹಾಗೂ ಮಾಹಿತಿಯನ್ನು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿರುವ ಶಿವನ್, ಆದಷ್ಟು ಬೇಗ ವಿಕ್ರಮ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಮುಂಜಾನೆ 1.30ರ ಸುಮಾರಿಗೆ ಚಂದಿರನ್ನು ಸುತ್ತುತ್ತಿದ್ದ ಆರ್ಬಿಟರ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತ್ತು. ನಿಧಾನವಾಗಿ ಚಂದ್ರನ ಮೇಲ್ಮೈನತ್ತ ಪ್ರಯಾಣ ಬೆಳೆಸಿತ್ತು. ಆದರೆ, ಚಂದಿರ ಮೇಲ್ಮೈ ತಲುಪಲು ಕೇವಲ 2.1 ಕಿ.ಮೀ ದೂರದಲ್ಲಿದ್ದಾಗ, ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತ್ತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸೂಕ್ತ ರೀತಿಯಲ್ಲಿ ಲ್ಯಾಂಡ್ ಆಗಿದೆಯೇ ಅಥವಾ ಬಿದ್ದು ಹೋಗಿದೆಯೇ ಎಂಬ ಮಾಹಿತಿ ಈವರೆಗೂ ಸಿಕ್ಕಿರಲಿಲ್ಲ. ಇದೀಗ ಲ್ಯಾಂಡರ್‌ನ ಛಾಯಾಚಿತ್ರವಂತೂ ಇಸ್ರೋಗೆ ಸಿಕ್ಕಿದೆ. ಮುಂದಿನ ಹಂತದಲ್ಲಿ ಲ್ಯಾಂಡರ್ ಜೊತೆ ಇಸ್ರೋಗೆ ಸಂಪರ್ಕ ಸಾಧ್ಯವಾದ್ರೆ, ವಿಕ್ರಮ್ ಲ್ಯಾಂಡರ್‌ನ ಸ್ಥಿತಿಗತಿ ತಿಳಿದುಬರಲಿದೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದಲ್ಲಿ, ಲ್ಯಾಂಡರ್‌ನ ಒಳಭಾಗದಲ್ಲಿರುವ ಪ್ರಜ್ಞಾನ್ ರೋವರ್ ಕೂಡಾ ಸುರಕ್ಷಿತವಾಗಿರಬಹುದು, ಚಂದ್ರನ ಅಂಗಳದಲ್ಲಿ ಪೂರ್ವ ನಿರ್ಧರಿತ ಯೋಜನೆಯಂತೆ ನಡೆದಾಡಬಹುದು ಅನ್ನೋ ಆಶಾವಾದ ಇಸ್ರೋ ವಿಜ್ಞಾನಿಗಳಲ್ಲಿದೆ.

Comments are closed.