
ನವದೆಹಲಿ: ಮುಂದಿನ ಎರಡು ವಾರಗಳಲ್ಲಿ ಚಂದ್ರಯಾನ-2 ಲ್ಯಾಂಡರ್ ಸಂಪರ್ಕ ಪಡೆಯಲು ಸಕಲ ಪ್ರಯತ್ನವನ್ನು ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಅಧ್ಯಕ್ಷ ಕೆ.ಶಿವನ್ ತಿಳಿಸಿದರು.
ಶನಿವಾರ ಮುಂಜಾನೆ ಇನ್ನೆನು ಕೆಲವೇ ಕ್ಷಣಗಳಲ್ಲಿ ಚಂದ್ರ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ಲ್ಯಾಂಡರ್ ವಿಕ್ರಂ ಸಂಪರ್ಕ ಕಡಿತಗೊಂಡಿತ್ತು.
ಸದ್ಯದಲ್ಲಿ ಸಂವಹನ ಕಡಿತಗೊಂಡಿದೆ. ಮುಂದಿನ 14 ದಿನಗಳಲ್ಲಿ ಲ್ಯಾಂಡರ್ ಸಂವಹನಕ್ಕೆ ಮರು ಸಂಪರ್ಕಕ್ಕಾಗಿ ಪ್ರಯತ್ನಿಸುವುದಾಗಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಶಿವನ್ ತಿಳಿಸಿದರು. ಮೊದಲ ಹಂತದ ಕಾರ್ಯಾಚರಣೆ ಎಲ್ಲವೂ ನಿರೀಕ್ಷೆಯಂತೆ ನಡೆಯಿತು. ಆದರೆ, ಕೊನೆಯ ಹಂತದ ಕಾರ್ಯಾಚರಣೆ ವೇಳೆ ನಾವು ಸಂವಹನ ಕಳೆದುಕೊಂಡೆವು ಎಂದು ಅವರು ತಿಳಿಸಿದರು.
ಚಂದ್ರದ ಮೇಲ್ಮೈನಿಂದ ಕೇವಲ 2.1 ಕಿ.ಮೀ. ಅಂತರದಲ್ಲಿ ಇರುವಾಗ, ಇನ್ನೆನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯಬೇಕು ಎನ್ನುವಾಗ ವಿಜ್ಞಾನಿಗಳು ಲ್ಯಾಂಡರ್ ವಿಕ್ರಂ ಸಂಪರ್ಕವನ್ನು ಕಳೆದುಕೊಂಡರು.
ಮುಂದಿನ ಕೆಲ ವರ್ಷಗಳ ಕಾಲ ಆರ್ಬಿಟರ್ ನಮಗೆ ಸಾಕಷ್ಟು ದತ್ತಾಂಶಗಳನ್ನು ಒದಗಿಸಲಿದೆ. ನಾವು ನಮ್ಮ ವೈಜ್ಞಾನಿಕ ಯೋಜನೆಯಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ತಂತ್ರಜ್ಞಾನ ಪ್ರದರ್ಶನದಲ್ಲಿ ವಿಫಲರಾದೆವು. ನಾವು ಈ ಯೋಜನೆಯಲ್ಲಿ ಶೇ.100ರಷ್ಟು ಯಶಸ್ವಿಯಾಗಿದ್ದೇವೆ ಎಂದು ಶಿವನ್ ಹೇಳಿದರು.
ಇದನ್ನು ಓದಿ: ಕಾಲೇಜು ಮೆಟ್ಟಿಲು ಹತ್ತುವವರೆಗೂ ಚಪ್ಪಲಿ ಹಾಕದ ಇಸ್ರೋ ಅಧ್ಯಕ್ಷ ಶಿವನ್ ಬಯಸಿದ್ದು ಇದುವರೆಗೂ ಸುಲಭವಾಗಿ ದಕ್ಕಿಲ್ಲ!
ಇದೇ ಮೊದಲ ಬಾರಿಗೆ ನಾವು ಚಂದ್ರನ ದಕ್ಷಿಣ ಧ್ರುವದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಜಗತ್ತು ಮೊದಲ ಬಾರಿಗೆ ಈ ಮಾಹಿತಿಯನ್ನು ಪಡೆಯುತ್ತಿದೆ ಎಂದರು.
ಈ ಮೊದಲು ನಾವು ಯೋಚಿಸಿದ್ದಕ್ಕಿಂತ ಹೆಚ್ಚಿನದಾಗಿ ಆರ್ಬಿಟರ್ ಚಂದ್ರನ ಸುತ್ತ ಸುತ್ತಲಿದೆ. ಈ ಮೊದಲು ನಾವು ಆರ್ಬಿಟರ್ ಚಂದ್ರನ ಸುತ್ತ ಒಂದು ವರ್ಷ ಸುತ್ತಲಿದೆ ಎಂದು ಅಂದಾಜಿಸಿದ್ದೆವು. ಆದರೆ, ಆರ್ಬಿಟರ್ 7.5 ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಏಕೆಂದರೆ ಅಷ್ಟು ಪ್ರಮಾಣದ ಇಂಧನ ಅದಕ್ಕೆ ಸಿಗಲಿದೆ ಎಂದು ಮಾಹಿತಿ ನೀಡಿದರು.
Comments are closed.