ಕರ್ನಾಟಕ

ಮನೆಮನೆಗೆ ಮದ್ಯ ಪೂರೈಕೆ ಮಾಡುವ ವಿಚಾರ; ರಾಜ್ಯದ ಜನತೆ ಬಳಿ​ ಕ್ಷಮೆಯಾಚಿಸಿದ ಅಬಕಾರಿ ಸಚಿವ ಎಚ್​.ನಾಗೇಶ್

Pinterest LinkedIn Tumblr

ಬೆಂಗಳೂರು: ಮನೆಮನೆಗೆ ಮದ್ಯ ಪೂರೈಕೆ ಮಾಡುವ ವಿಚಾರ ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ನಾಗೇಶ್​ ಹೇಳಿಕೆಗೆ ಸ್ವತಃ ಮುಖ್ಯಮಂತ್ರಿ ಬಿಎಸ್​ ಯಡಿಯೂಪ್ಪ ಗರಂ ಆಗಿದ್ದರು. ಇದಾದ ಬೆನ್ನಲ್ಲೇ ಅಬಕಾರಿ ಸಚಿವ ಎಚ್​.ನಾಗೇಶ್ ರಾಜ್ಯದ ಜನತೆ ಬಳಿ​ ಕ್ಷಮೆಯಾಚಿಸಿದ್ದಾರೆ.

ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ತೆತ್ತಬೇಕು. ಅಲ್ಲದೆ ಕುಡಿದು ವಾಹನ ಚಲಾಯಿಸುವಾಗ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸಲು ಮನೆ ಬಾಗಿಲಿಗೆ ಮದ್ಯ ಯೋಜನೆ ಸಹಕಾರಿಯಾಗಲಿದೆ ಎಂಬ ಆಲೋಚನೆ ಸಚಿವ ಎಚ್​ನಾಗೇಶ್ ಅವರದ್ದಾಗಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ನಾಗೇಶ್​, “ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಬೇರೆ ರಾಜ್ಯದ ಉದಾಹರಣೆ ಕೊಟ್ಟಿದ್ದೆ ಅಷ್ಟೇ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ.ಈ ವಿಚಾರಕ್ಕೆ ಸಂಬಂಧಿಸಿ ರಾಜ್ಯದ ಮಹಿಳೆಯರ ಬಳಿ ನಾನು ಕ್ಷಮೆ ಕೇಳುತ್ತೇನೆ,” ಎಂದು ಹೇಳಿದ್ದಾರೆ.

ಸಾಕಷ್ಟು ಜನರ ಪ್ರಾಣ ತೆಗೆದಿರುವ ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುತ್ತದೆ ಎಂದು ನಾಗೇಶ್​ ಹೇಳಿದ್ದಾರೆ. “ಮನೆಮನೆಗೆ ಆಲ್ಕೋಹಾಲ್ ಪೂರೈಕೆ ಮಾಡುವ ವಿಚಾರದಲ್ಲಿ ಯಾವುದೇ ಆದೇಶವನ್ನೂ ನೀಡಿರಲಿಲ್ಲ. ಕೆಲ ತಾಂಡಾಗಳಲ್ಲಿ ಇನ್ನೂ ಕಳ್ಳಭಟ್ಟಿ ಬಳಕೆ ಆಗುತ್ತಿದೆ. ನಮ್ಮ ಸರ್ಕಾರ ಕಳ್ಳಭಟ್ಟಿ ನಿರ್ಮೂಲನೆ ಗುರಿ ಹೊಂದಿದೆ. ಈ ಬಗ್ಗೆ ತಾಂಡಾಗಳಲ್ಲಿ ಅಭಿಯಾನ ಆರಂಭಿಸುತ್ತೇವೆ,” ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ನಾಗೇಶ್​ ಹೇಳಿಕೆ ಏನು?
“ಹಾಲು ನೀಡುವ ಮಾದರಿಯಲ್ಲೇ ಮನೆ ಮನೆಗೆ ಮದ್ಯ ಸರಬರಾಜು ಮಾಡಲಾಗುತ್ತದೆ. ಅದಕ್ಕಾಗಿ ಮೊದಲೇ ಗುರುತಿನ ಚೀಟಿ ಹೊಂದಿರಬೇಕು. ಜಿಲ್ಲಾಧಿಕಾರಿಗಳು ಈ ಕಾರ್ಡ್​ ನೀಡುತ್ತಾರೆ. ಈ ಚೀಟಿ ಇದ್ದವರಿಗೆ ಮಾತ್ರ ಮದ್ಯವನ್ನು ಮನೆ ಬಾಗಿಲಿಗೆ ನೀಡಲಾಗುತ್ತದೆ,” ಎಂದು ನಾಗೇಶ್​ ಹೇಳಿದ್ದರು.

ಮದ್ಯ ಮಾರಾಟ ಮಳಿಗೆ ತೆರೆಯಲು ಹೊಸದಾಗಿ ಅನುಮತಿ ನೀಡುವುದಿಲ್ಲವಂತೆ. ಆದರೆ, ಪ್ರತಿ ಹಳ್ಳಿಯಲ್ಲೂ ಎಂಎಸ್​ಐಎಲ್ ಕೇಂದ್ರ ತೆರೆಯುವ ಯೋಜನೆ ಅವರದ್ದು! ಈ ಬಗ್ಗೆ ಮುಂದಿನ ದಿನಗಳಲ್ಲಿ ಅವರು ಯೋಜನೆ ರೂಪಿಸಲಾಗುವುದು ಎಂದು ಹೇಳಿದ್ದರು.

ಗರಂ ಆಗಿದ್ದ ಬಿಎಸ್​ವೈ:
ಅಬಕಾರಿ ಸಚಿವ ನಾಗೇಶ್ ಹೇಳಿಕೆಗೆ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಕೆಂಡಾಮಂಡಲವಾದ್ದರು. ಬೆಳಗ್ಗೆ ನಾಗೇಶ್​ಗೆ ಕರೆ ಮಾಡಿದ ಬಿಎಸ್​ವೈ ಕ್ಲಾಸ್​ ತೆಗೆದುಕೊಂಡಿದ್ದರು.

“ನಿಮಗೆ ಬಾಯಿಗೆ ಬಂದಂತೆ ಮಾತಾಡಲು ಹೇಳಿದ್ದು ಯಾರು? ನಿಮ್ಮ ಚಿಂತನೆ ನಿಮ್ಮಲ್ಲೇ ಇಟ್ಟುಕೊಳ್ಳಿ. ನಿಮ್ಮ ಹೇಳಿಕೆ ವಿವಾದದಿಂದ ಕೂಡಿದೆ. ಮೊದಲೆ ನೆರೆ ಪರಿಹಾರ ಕೊಟ್ಟಿಲ್ಲ ಎಂದು ವಿಪಕ್ಷಗಳು ಮುಗಿ ಬಿದ್ದಿವೆ. ಈ ಮಧ್ಯೆ ರೀತಿ ಹೇಳಿಕೆ ಕೊಟ್ಟಿದ್ದು ಯಾಕೆ? ಜನ, ವಿಪಕ್ಷಗಳು ನಿಮ್ಮ ಹೇಳಿಕೆಗೆ ಉಗಿಯುತ್ತಾರೆ. ಕೂಡಲೆ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿ,” ಎಂದು ನಾಗೇಶ್​ಗೆ ಬಿಎಸ್​ವೈ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ನಾಗೇಶ್ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

Comments are closed.