ರಾಷ್ಟ್ರೀಯ

74ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದ ವೃದ್ಧೆ!

Pinterest LinkedIn Tumblr

ವಿಜಯವಾಡ: ಇದನ್ನು ಪವಾಡ ಎನ್ನಬೇಕೋ, ಅಜ್ಜಿಯ ಧೈರ್ಯ ಮತ್ತು ಶಕ್ತಿ ಎನ್ನಬೇಕೊ ಅಥವಾ ದೇವರ ಆಶೀರ್ವಾದ ಎನ್ನಬೇಕೊ ಗೊತ್ತಿಲ್ಲ. ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಆಂಧ್ರ ಪ್ರದೇಶದ ಗುಂಟೂರಿನಲ್ಲಿ 74ನೇ ವಯಸ್ಸಿನ ವೃದ್ಧೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ.

ಗುಂಟೂರು ಸಮೀಪ ಪೂರ್ವ ಗೋದಾವರಿ ಜಿಲ್ಲೆಯ ವೈ ರಾಜಾ ರಾವ್, ಮಂಗ್ಯಮ್ಮ ಎಂಬುವವರನ್ನು 1962ರಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎಷ್ಟು ವರ್ಷಗಳಾದರೂ ದಂಪತಿಗೆ ಮಕ್ಕಳಾಗಲಿಲ್ಲ. “ಮಕ್ಕಳಿಲ್ಲದ ನಮ್ಮನ್ನು ಸಂಬಂಧಿಕರು, ನೆರೆಹೊರೆಯವರು ಕೀಳಾಗಿ ಕಾಣುತ್ತಿದ್ದರು. ಯಾವುದೇ ಸಮಾರಂಭಗಳಿಗೆ ಆಹ್ವಾನಿಸುತ್ತಿರಲಿಲ್ಲ. ಅನೇಕ ವೈದ್ಯರ ಬಳಿ ತಪಾಸಣೆ ಮಾಡಿಸಿದ್ದೆವು. ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವು ಕೊನೆಗೆ ಅಹಲ್ಯ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ಐವಿಎಫ್ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ನಿರ್ಧರಿಸಿದೆವು” ಎಂದು ರಾಜಾ ರಾವ್ ಸಂತೋಷ್ ವ್ಯಕ್ತಪಡಿಸಿದ್ದಾರೆ.

ಮಂಗ್ಯಮ್ಮ ಅವರ ನೆರೆ ಮನೆಯ ಮಹಿಳೆಯೊಬ್ಬರು 55ನೇ ವರ್ಷದಲ್ಲಿ ಪ್ರಣಾಳ ಶಿಶು(ಐವಿಎಫ್) ಮೂಲಕ ಮಗುವನ್ನು ಪಡೆದಿದ್ದರು. ಮಕ್ಕಳನ್ನು ಪಡೆಯಬೇಕೆಂಬ ತೀವ್ರ ಬಯಕೆಯಿಂದ ಕೃತಕ ಗರ್ಭಧಾರಣೆಯಾದರೂ ಸರಿ ಎಂದು ಈ ದಂಪತಿ ನಿರ್ಧರಿಸಿದರು.

ಈ ವೃದ್ಧೆಗೆ ಸಕ್ಕರೆ ಕಾಯಿಲೆ, ಬಿಪಿಯಂತಹ ಯಾವುದೇ ಖಾಯಿಲೆಗಳಿರಲಿಲ್ಲ. ಹೀಗಾಗಿ ವೈದ್ಯರು ಕೂಡ ಕೃತಕ ಗರ್ಭಧಾರಣೆ ಚಿಕಿತ್ಸೆ ನೀಡಲು ಒಪ್ಪಿದರು. ಐವಿಎಫ್ ಚಿಕಿತ್ಸೆ ಮಂಗ್ಯಮ್ಮ ಗರ್ಭದಲ್ಲಿ ಪ್ರಯೋಗಿಸಿದ್ದು ಮೊದಲ ಹಂತದಲ್ಲಿಯೇ ಯಶಸ್ವಿಯಾಯಿತು. ಗರ್ಭ ಧರಿಸಿದಲ್ಲಿಂದ ವಿಶೇಷ ತಜ್ಞ ವೈದ್ಯರು ತೀವ್ರ ನಿಗಾ ಇರಿಸುತ್ತಿದ್ದರು. ದಿನಗಳು ಕಳೆದಂತೆ ಅಜ್ಜಿಯ ಹೊಟ್ಟೆಯಲ್ಲಿ ಅವಳಿ ಶಿಶುಗಳಿವೆ ಎಂದು ಗೊತ್ತಾಯಿತು. ನಾಲ್ವರು ವಿಶೇಷ ತಜ್ಞ ವೈದ್ಯರ ಸಮ್ಮುಖದಲ್ಲಿ ಸಿಸೇರಿಯನ್ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಲಾಯಿತು.

ತಂದೆಯಾದ ಸಂತಸದಲ್ಲಿರುವ 78 ವರ್ಷದ ವೃದ್ಧ ವೈ ರಾಜಾ ರಾವ್, “1962 ಮಾರ್ಚ್ 22ರಂದು ಮಂಗ್ಯಮ್ಮ ಅವರೊಂದಿಗೆ ನನ್ನ ವಿವಾಹವಾಯಿತು. ಅಂದಿನಿಂದ ಸತತ 57 ವರ್ಷ ಮಕ್ಕಳಿಲ್ಲದ ಕೊರಗು ನಮ್ಮನ್ನು ಕಾಡಿತ್ತು. “ಐವಿಎಫ್ ವಿಧಾನದ ಮೂಲಕ ಇಳಿ ವಯಸ್ಸಿನಲ್ಲಿ ಗರ್ಭ ಧರಿಸುವುದು ಸರಿಯಲ್ಲ ಎಂದು ಬಂಧುಗಳಲ್ಲಿ ಹಲವರು ಧೈರ್ಯ ಕುಗ್ಗಿಸಿದರು. ಆದಾಗ್ಯೂ ಗರ್ಭಧಾರಣೆಗೆ ನಾವು ಸಮ್ಮತಿಸಿದೆವು” ಎಂದು ಹೇಳಿದರು.

ಈ ಮೂಲಕ 74ನೇ ವಯಸ್ಸಿನಲ್ಲಿ ಶಿಶುವಿಗೆ ಜನ್ಮ ನೀಡಿ ಅಜ್ಜಿ ದಾಖಲೆ ಬರೆದಿದ್ದಾರೆ.74 ವರ್ಷದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ದೇಶದಲ್ಲಿ ಇದೇ ಮೊದಲು.

Comments are closed.