ಕರ್ನಾಟಕ

ನಾನು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಲ್ಲ’; ಉಮೇಶ್ ಕತ್ತಿ

Pinterest LinkedIn Tumblr


ಚಿಕ್ಕೋಡಿ (ಆಗಸ್ಟ್.26); “ನನಗೆ ಸಚಿವ ಸ್ಥಾನ ಖಾತ್ರಿಯ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಬಂದೆದೆಯೇ ವಿನಃ ಪಕ್ಷದಿಂದ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಾನು ಸಚಿವನಾಗಬೇಕು ಎಂದು ಯಾರಿಗೂ ಒತ್ತಡ ಹಾಕಿಲ್ಲ. ಸ್ಥಾನ ಕೊಟ್ರೆ ಉತ್ತಮವಾಗಿ ಕೆಲಸ ಮಾಡ್ತೀನಿ. ಇಲ್ಲಾಂದ್ರೆ ಕ್ಷೇತ್ರದ ಜನರ ಸೇವೆ ಮಾಡ್ತೀನಿ” ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ಕಳೆದ ಮಂಗಳವಾರ 17 ಶಾಸಕರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬೆಳಗಾವಿ ನಾಯಕ ಉಮೇಶ್ ಕತ್ತಿಗೆ ಸ್ಥಾನ ನಿರಾಕರಿಸಲಾಗಿತ್ತು. ಪರಿಣಾಮ ಅವರು ಪಕ್ಷದ ಒಳಗೆ ಅಸಮಾಧಾನವನ್ನು ತೋಡಿಕೊಂಡಿದ್ದರು. ಅಲ್ಲದೆ, ಮೈತ್ರಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ನಿರ್ವಹಿಸಿದ ಪಾತ್ರವನ್ನು ಬಿಜೆಪಿಯಲ್ಲಿ ಉಮೇಶ್ ಕತ್ತಿ ನಿರ್ವಹಿಸುವ ಎಲ್ಲಾ ಸೂಚನೆಯನ್ನೂ ನೀಡಿದ್ದರು. ಪರಿಣಾಮ ಬಿಜೆಪಿ ನಾಯಕರು ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ.

ಆದರೆ, ಈ ಕುರಿತು ಇಂದು ಚಿಕ್ಕೋಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಉಮೇಶ್ ಕತ್ತಿ, “ಈಗಾಗಲೇ 17 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸ್ಥಾನ ನೀಡುವ ಬಗ್ಗೆ ಈವರೆಗೆ ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಸವಕಾಶ ಕೊಟ್ಟರೆ ಜಿಲ್ಲೆಯಾದ್ಯಂತ ಸುತ್ತಾಡಿ ಒಳ್ಳೆಯ ಕೆಲಸ ಮಾಡ್ತೀನಿ” ಎಂದು ಹೇಳಿದ್ದಾರೆ.

ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡಲು ಆರ್​​ಎಸ್​ಎಸ್​ ನಾಯಕರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ವಾದ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಈವರೆಗೆ ಬಿಜೆಪಿ ಶಾಸಕನಾಗಿ ಪಕ್ಷದ ಆದೇಶಗಳನ್ನು ಪಾಲಿಸುತ್ತಾ ಬಂದಿದ್ದೇನೆ. ನಾನು ಯಾವತ್ತೂ ಯಡಿಯೂರಪ್ಪನವರಿಗೆ ಮೋಸ ಮಾಡಿಲ್ಲ. ಸಂಘದ ಯಾವ ಸೂಚನೆಗಳನ್ನೂ ಮೀರಿಲ್ಲ. ಸಂಘದ ಮೇಲೆ ಯಾವ ಕೋಪವೂ ನನಗಿಲ್ಲ. ನಾನು ತುಂಬಾ ಚಿಕ್ಕವನು ಅವರು ಹೇಳಿದ ಮಾರ್ಗದರ್ಶನದಲ್ಲೇ ಮುಂದುವರೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಒಂದು ವರ್ಷದ ಒಳಗೆ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆ ಕುಹಕವಾಡಿದ ಉಮೇಶ್ ಕತ್ತಿ, “ಸಿದ್ದರಾಮಯ್ಯ ಯಾವಾಗಿನಿಂದ ಭವಿಷ್ಯ ಹೇಳಲು ಆರಂಭಿಸಿದರು ಎಂಬುದು ನನಗೆ ಗೊತ್ತಿಲ್ಲ. ಭವಿಷ್ಯ ಹೇಳೋದು ದೇವೆಗೌಡ್ರು ಅಪ್ಪ ಮಕ್ಕಳಿಗೆ ಅಷ್ಟೇ ಗೊತ್ತಿದೆ ಅಂತ ನಾನು ಭಾವಿಸಿದ್ದೆ. ಆದರೆ, ಸಿದ್ದರಾಮಯ್ಯ ಯಾವಾಗಿಂದ ಹೇಳ್ತಿದ್ದಾರೆ ಗೊತ್ತಿಲ್ಲ” ಎಂದು ಕಾಲೆಳೆದಿದ್ದಾರೆ.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ತಮಗೆ ಫೋನ್ ಮಾಡಿದ ವಿಚಾರಕ್ಕೂ ಉತ್ತರಿಸಿದ ಅವರು, “ಸಿದ್ದರಾಮಯ್ಯ ನನ್ನ ಹಳೆಯ ಮಿತ್ರ. ಹೀಗಾಗಿ ಅವರು ಫೋನ್ ಮಾಡಿದ್ದು ನಿಜ. ಹಳೆಯ ಮಿತ್ರ ಇಂದು ಕೂಡಿ ಇರ್ತಿವಿ ಮುಂದೆಯೂ ಕೂಡಿ ಇರ್ತಿವಿ. ನನ್ನ ಪಕ್ಷಕ್ಕೆ ಅವರು ಬರಲ್ಲ ನಾನು ಅವರ ಪಕ್ಷಕ್ಕೆ ಹೊಗಲ್ಲ” ಎಂದು ತಿಳಿಸಿದ್ದಾರೆ.

Comments are closed.