ಕರ್ನಾಟಕ

ಕುಮಾರಸ್ವಾಮಿಯಿಂದ 17 ಅನರ್ಹ ಶಾಸಕರ ಫೋನ್ ಕದ್ದಾಲಿಕೆ: ವಿಶ್ವನಾಥ್ ಆರೋಪ

Pinterest LinkedIn Tumblr


ಮೈಸೂರು: ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಮೇಲೆ ದೂರವಾಣಿ ಕದ್ದಾಲಿಕೆಯ ಗಂಭೀರ ಆರೋಪವೊಂದು ಕೇಳಿಬಂದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರಸ್ ಹಾಗೂ ಜೆಡಿಎಸ್ ನ 17 ಜನ ಶಾಸಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಮತ್ತು ಹೀಗೆ ಮಾಡುವುದಕ್ಕೆ ಸ್ವತಃ ಮುಖ್ಯಮಂತ್ರಿಗಳ ಕಛೇರಿಯಿಂದಲೇ ಸೂಚನೆ ಹೋಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ವಿಶ್ವಾನಾಥ್ ಅವರು ಬಹಿರಂಗಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬಯಿಯಲ್ಲಿದ್ದ ನಮಗೆ ಬೆಂಗಳೂರಿನಿಂದ ಪದೇ ಪದೇ ಕರೆಗಳು ಬರುತ್ತಿದ್ದವು. ಮತ್ತು ನಿಮ್ಮ ದಾಖಲೆಗಳೆಲ್ಲಾ ನಮಗೆ ಸಿಕ್ಕಿವೆ ನೀವು ತಕ್ಷಣ ವಾಪಾಸು ಬರಲೇಬೇಕು ಎಂದು ಬೆದರಿಸುವ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಹಾಗೆ ಬರುತ್ತಿದ್ದ ಕರೆಗಳು ಮುಖ್ಯಮಂತ್ರಿ ಕಛೇರಿಯಿಂದಲೇ ಬರುತ್ತಿದ್ದವು ಎಂಬ ಗಂಭೀರವಾದ ಆರೋಪವನ್ನು ವಿಶ್ವನಾಥ್ ಅವರು ಮಾಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಸಮನ್ವಯ ಸಮಿತಿಯ ಅಧ್ಯಕ್ಷ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಜ್ಯ ಗೃಹ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರ ದೂರವಾಣಿ ಕರೆಗಳನ್ನೂ ಸಹ ಕದ್ದಾಲಿಸಲಾಗಿದೆ ಎಂಬ ಆರೋಪ ವಿಶ್ವನಾಥ್ ಕಡೆಯಿಂದ ಬಂದಿದೆ.

ಈ ವಿಚಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇದರ ಕುರಿತಾಗಿ ತನಿಖೆ ನಡೆಸಬೇಕು ಎಂದು ವಿಶ್ವನಾಥ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

ಹಿಂದಿನ ಗೃಹ ಸಚಿವರು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಬಹಳಷ್ಟು ಜನರ ದೂರವಾಣಿ ಕರೆಗಳನ್ನು ಸುಮಾರು ಆರು ತಿಂಗಳುಗಳಿಂದ ಕದ್ದಾಲಿಸಲಾಗುತ್ತಿತ್ತು ಎಂಬ ಆರೋಪವನ್ನೂ ಸಹ ವಿಶ್ವನಾಥ್ ಅವರು ಇದೇ ಸಂದರ್ಭದಲ್ಲಿ ಮಾಡಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದ ನನ್ನ ದೂರವಾಣಿ ಕರೆಗಳನ್ನೇ ಕದ್ದಾಲಿಸಲಾಗುತ್ತಿತ್ತು ಎಂದಾದ ಮೇಲೆ ಉಳಿದ ಶಾಸಕರನ್ನು ಅವರು ಬಿಟ್ಟಿರುತ್ತಾರೆಯೇ? ಕಾಂಗ್ರೆಸ್ ಪಕ್ಷದವರಾಗಿದ್ದ ಗೃಹ ಸಚಿವರ ದೂರವಾಣಿಯನ್ನೇ ಕದ್ದಾಲಿಸಲಾಗಿದೆ ಎಂದರೆ ಅವರ ಮನಸ್ಥಿತಿಯ ಬಗ್ಗೆ ನೀವೇ ಯೋಚಿಸಿ ಎಂದು ವಿಶ್ವನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದರು.

Comments are closed.