ಕರ್ನಾಟಕ

ಇಂದು ರಾಜ್ಯ ಸೇರಿ ದೇಶಾದ್ಯಂತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

Pinterest LinkedIn Tumblr


ಬೆಂಗಳೂರು(ಆ. 13): ಕರ್ನಾಟಕ ಸೇರಿದಂತೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹ ಉಕ್ಕೇರಲಿದೆ. ದಕ್ಷಿಣದ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ. ರಾಜಸ್ಥಾನ, ಕೇರಳ ಮತ್ತು ಮಧ್ಯ ಪ್ರದೇಶ ರಾಜ್ಯಗಳ ಕೆಲವೆಡೆ ಅತ್ಯುಗ್ರವಾಗಿ ಮಳೆ ರಾಚಲಿದೆ ಎಂದು ಇಲಾಖೆ ಎಚ್ಚರಿಸಿದೆ. ಮಧ್ಯಪ್ರದೇಶದ ಮಧ್ಯ ಭಾಗ ಮತ್ತು ವಿದರ್ಭ ಪ್ರಾಂತ್ಯಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಂಭವ ಇದೆ.

ಆ. 14ರಂದು ಅತ್ಯುಗ್ರ ಮಳೆಯಾಗಬಹುದಾದ ಪ್ರದೇಶಗಳು:
ಪೂರ್ವ ರಾಜಸ್ಥಾನ

ಕೇರಳ
ಮಧ್ಯಪ್ರದೇಶ ಪಶ್ಚಿಮ ಭಾಗ

ಭಾರೀ ಮಳೆಯಾಗಬಹುದಾದ ಪ್ರದೇಶಗಳು:
ಕರ್ನಾಟಕದ ಕರಾವಳಿ ಭಾಗ
ಮಧ್ಯಪ್ರದೇಶದ ಪೂರ್ವ ಭಾಗ
ಮಹಾರಾಷ್ಟ್ರದ ಮಧ್ಯ ಭಾಗ
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯ

ತೀವ್ರ ಮಳೆಯಾಗಬಹುದಾದ ಪ್ರದೇಶಗಳು:
ಕರ್ನಾಟಕದ ದಕ್ಷಿಣ ಭಾಗ, ತೆಲಂಗಾಣ, ಗೋವಾ, ಗುಜರಾತ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಹರಿಯಾಣ, ಚಂಡೀಗಡ, ದೆಹಲಿ, ರಾಜಸ್ಥಾನದ ಪಶ್ಚಿಮ ಭಾಗ, ಛತ್ತೀಸ್​ಗಡ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಮ್, ಒಡಿಶಾ, ಅಸ್ಸಾಮ್, ಮೇಘಾಲಯ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ಒಡಿಶಾದ್ಯಂತ ಮುಂಗಾರು ಮಳೆ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ಅಂದಾಜು ಮಾಡಿದೆ.

ಕಳೆದ ಎರಡು ವಾರದಿಂದ ಭೀಕರ ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿರುವ ರಾಜ್ಯಗಳಿಗೆ ಸದ್ಯಕ್ಕೆ ರಿಲೀಫ್ ಸಿಗುವ ಲಕ್ಷಣ ಇದ್ದಂತಿಲ್ಲ. ಕರ್ನಾಟಕದಲ್ಲಿ ಕಳೆದ 6 ದಶಕಗಳಲ್ಲೇ ಕಂಡು ಕೇಳರಿಯದಷ್ಟು ಮಳೆ ಮತ್ತು ಪ್ರವಾಹ ಆರ್ಭಟಿಸಿದೆ. ನೀರಿಗಾಗಿ ಹಾಹಾಕಾರ ಮಾಡುತ್ತಿದ್ದ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಅತಿವೃಷ್ಟಿ ಕಂಡಿವೆ.

Comments are closed.