ಕರ್ನಾಟಕ

ಪ್ರವಾಹ: ದೇಶಾದ್ಯಂತ 200ರ ಗಡಿ ದಾಟಿದ ಸಾವಿನ ಪ್ರಮಾಣ

Pinterest LinkedIn Tumblr


ಬೆಂಗಳೂರು(ಆ. 13): ರಾಜ್ಯದಲ್ಲಿ 10 ದಿನಗಳ ಕಾಲ ನಡೆದ ಮಳೆ ಮತ್ತು ಪ್ರವಾಹಗಳ ಆರ್ಭಟಕ್ಕೆ ಈವರೆಗೆ ಮೃತಪಟ್ಟವರ ಸಂಖ್ಯೆ 54 ಇದೆ. 15 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 21 ಜಿಲ್ಲೆಗಳ 100 ತಾಲೂಕುಗಳಲ್ಲಿ ಪ್ರವಾಹ ರಾಚಿದೆ. ಮುಖ್ಯಮಂತ್ರಿ ಕಚೇರಿಯಿಂದ ಮಾಧ್ಯಮಗಳಿಗೆ ಈ ಮಾಹಿತಿ ಸಿಕ್ಕಿದೆ.

ಹಾಗೆಯೇ, ದೇಶಾದ್ಯಂತ ಮಳೆ ಮತ್ತು ಪ್ರವಾಹಗಳಿಗೆ ಬಲಿಯಾದವರ ಸಂಖ್ಯೆ 200ರ ಗಡಿ ದಾಟಿರುವುದು ತಿಳಿದುಬಂದಿದೆ. ಕೇರಳದಲ್ಲೇ ಅತೀ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇಲ್ಲಿ ಹೆಚ್ಚೂಕಡಿಮೆ 100 ಮಂದಿ ಸಾವನ್ನಪ್ಪಿದ್ದಾರೆ. ಅದರ ನಂತರದ ಸ್ಥಾನ ಕರ್ನಾಟಕದ್ದಾಗಿದೆ. ಮಹಾರಾಷ್ಟ್ರದಲ್ಲೂ 40ಕ್ಕೂ ಹೆಚ್ಚು ಮಂದಿ ಮಳೆಯ ಆರ್ಭಟಕ್ಕೆ ಮೃತಪಟ್ಟಿದ್ದಾರೆ.

ಕರ್ನಾಟಕ ಸಿಎಂ ಕಚೇರಿಯಿಂದ ಲಭಿಸಿದ ಮಾಹಿತಿಯ ವಿವರ:
ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ – 54
ಪ್ರವಾಹದಿಂದ ನಾಪತ್ತೆಯಾದವರ ಸಂಖ್ಯೆ – 15
ಪ್ರವಾಹ ಕಂಡ ಪ್ರದೇಶಗಳು – 21 ಜಿಲ್ಲೆಯಲ್ಲಿನ‌ 100 ತಾಲ್ಲೂಕುಗಳು ಪ್ರವಾಹಪೀಡಿತ
ಜಾನುವಾರುಗಳು ಸಾವು – 852
ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆದವರು – 6,97,398
ಪ್ರವಾಹದಲ್ಲಿ ಪ್ರಾಣಿಗಳು ರಕ್ಷಣೆ – 51,460
ಗಂಜಿ ಕೇಂದ್ರದಲ್ಲಿ ಇರುವ ನಿರಾಶ್ರಿತರು – 3,90,210
ಪ್ರವಾಹದಲ್ಲಿ ಬೆಳೆ ನಾಶವಾಗಿರುವುದು – 4.45ಲಕ್ಷ ಹೆಕ್ಟೇರ್
ಪ್ರವಾಹದಲ್ಲಿ ಹಾನಿಗೊಳಗಾದ ‌ಮನೆಗಳು ಒಟ್ಟು ‌– 55,325

ದೇಶಾದ್ಯಂತ ಸಾವಿನ ಸಂಖ್ಯೆ 200ಕ್ಕೂ ಹೆಚ್ಚು:

ಕಳೆದ ವರ್ಷವೂ ಪ್ರವಾಹಕ್ಕೆ ತುತ್ತಾಗಿ ಜರ್ಝರಿತಗೊಂಡಿದ್ದ ಕೇರಳದಲ್ಲಿ ಈ ಬಾರಿ 91 ಮಂದಿ ಸಾವನ್ನಪ್ಪಿರುವ ಅಧಿಕೃತ ಮಾಹಿತಿ ಮಂಗಳವಾರ ಬಿಡುಗಡೆಯಾಗಿದೆ. ಭೂಕುಸಿತಗಳಿಂದಾಗಿಯೇ ಹೆಚ್ಚಾಗಿ ಇಲ್ಲಿ ಸಾವುನೋವು ಸಂಭವಿಸಿದೆ. ಮಲಪ್ಪುರಂ, ಕೋಳಿಕೋಡ್, ವಯನಾಡ್, ಅಲಪ್ಪುಳ, ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ಭೀಕರ ಪ್ರವಾಹ, ಭೂಕುಸಿತ ದುರಂತಗಳು ಹೆಚ್ಚಾಗಿ ಆಗಿವೆ. ಕೇರಳದ ಬಹುತೇಕ ಎಲ್ಲಾ ಜಿಲ್ಲೆಗಳೂ ಪ್ರವಾಹಕ್ಕೆ ತುತ್ತಾಗಿವೆ.

ಪಶ್ಚಿಮ ಕರಾವಳಿಯಲ್ಲಿರುವ ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಬಾರಿ ಪ್ರವಾಹದ ರೌದ್ರ ನರ್ತನ ವಿಪರೀತವಾಗಿದೆ. ಹಾಗೆಯೇ ಪೂರ್ವ ಕರಾವಳಿಯಲ್ಲಿರುವ ಒಡಿಶಾದಲ್ಲೂ ಮಳೆ ಮತ್ತು ಪ್ರವಾಹ ರಾಚಿದೆ. ಇಲ್ಲಿ 8ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ:

ಕರ್ನಾಟಕದಲ್ಲಿ ಬಹುತೇಕ ಕಡೆ ಮಳೆ ನಿಂತಿದೆ. ಪ್ರವಾಹ ತಗ್ಗಿದೆ. ಈಗ ಭೂಕುಸಿತದ ಅಪಾಯ ಜನರ ಮುಂದಿದೆ. ರೋಗ ರುಜಿನಗಳ ನಿಯಂತ್ರಣದ ಸವಾಲು ಇದೆ. ಸಂತ್ರಸ್ತರಿಗೆ ಪರಿಹಾರ ನೀಡುವುದು, ಪುನವರ್ವಸತಿ ಕಲ್ಪಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ. ಇದೇ ವೇಳೆ, ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ. ಚಿಕ್ಕಮಗಳೂರಿನ ಮೂಡಿಗೆರೆಯ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸುತ್ತಲೂ ಗುಡ್ಡ ಕುಸಿದಿದ್ದರಿಂದ ಒಂದು ವಾರದಿಂದ ಊರಿನಲ್ಲೇ ಸಿಲುಕಿದ್ದ 12 ಗ್ರಾಮಸ್ಥರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಗ್ರಾಮದಿಂದ 76 ಮಂದಿಯನ್ನು ಸೈನಿಕರು ರಕ್ಷಣೆ ಮಾಡಿದ್ದರು. ಆಗ ಈ 12 ಮಂದಿ ತಾವು ಇಲ್ಲಿಯೇ ಇರುತ್ತೇವೆ ಎಂದು ಹಠ ತೊಟ್ಟು ಉಳಿದುಕೊಂಡಿದ್ದರು. ಈಗ ಇತರ ಗ್ರಾಮಸ್ಥರ ಮನವಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಈ 12 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ.

ಮಲಪ್ರಭೆಗೆ ಹಾರಿದರಾ ವಯೋವೃದ್ಧೆ?

ಮಳೆ ಮತ್ತು ಪ್ರವಾಹಗಳು ಜನರನ್ನು ದೈಹಿಕವಾಗಿ ಹೈರಾಣಗೊಳಿಸುವುದರ ಜೊತೆಗೆ ಮಾನಸಿಕವಾಗಿ ಜರ್ಝರಿತಗೊಳಿಸಿದೆ. ತಮ್ಮ ಕಣ್ಮುಂದೆಯೇ ಮನೆ ಆಸ್ತಿ ಪಾಸ್ತಿ ಕಳೆದುಕೊಂಡು ವೇದನೆ ಅನುಭವಿಸುತ್ತಿರುವ ಮತ್ತು ರೋಧಿಸುತ್ತಿರುವವರ ಸಂಖ್ಯೆ ಬಹಳಷ್ಟಿದೆ. ಬಾಗಲಕೋಟೆಯ ರಾಮಥಾಳ ಗ್ರಾಮದ 60 ವರ್ಷದ ರೇಣುಕಾ ಯರನಾಳ ಎಂಬುವವರು ಮಾನಸಿಕ ಖಿನ್ನತೆಗೊಳಗಾಗಿ ಮಲಪ್ರಭೆ ನದಿಗೆ ಹಾರಿದರೆನ್ನಲಾಗಿದೆ. ತಾವು ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮತ್ತು ಕಷ್ಟಪಟ್ಟು ಕಟ್ಟಿದ್ದ ಮನೆಯು ಪ್ರವಾಹಕ್ಕೆ ತುತ್ತಾಗಿದ್ದನ್ನು ಕಂಡು ಮನನೊಂದು ಈ ವೃದ್ಧೆ ನದಿಗೆ ಹಾರಿರುವ ಶಂಕೆ ಇದೆ. ಎನ್​ಡಿಆರ್​ಎಫ್​ನ 24 ಮಂದಿ ಸೇರಿದಂತೆ 30ಕ್ಕೂ ಹೆಚ್ಚು ಜನರು ಎರಡು ಬೋಟ್​ಗಳ ಮೂಲಕ ವೃದ್ಧೆಯ ಶೋಧದಲ್ಲಿ ತೊಡಗಿದ್ದಾರೆ.

Comments are closed.