ಕರ್ನಾಟಕ

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಬಿನಿ ಮತ್ತು ಹೇಮಾವತಿ

Pinterest LinkedIn Tumblr


ಮಂಡ್ಯ (ಆಗಸ್ಟ್.10); ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಎಲ್ಲೆಡೆ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದೆ. ಮನೆ-ಮಠ ಕಳೆದುಕೊಂಡು ಜನ ಬೀದಿಗೆ ಬೀಳುವಂತಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವುದೇ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲೂ ಮಳೆಯಿಂದಾಗಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಕಳೆದ ಒಂದು ವಾರದಿಂದ ಮಲೆನಾಡಿನ ಹಾಸನದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೇಮಾವತಿ ನದಿ ತುಂಬಿ ಹರಿಯುತ್ತಿದ್ದರೆ, ಇತ್ತಕಡೆ ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ದಾಖಲೆಯ ಮಳೆಯಾಗುತ್ತಿದೆ. ಪರಿಣಾಮ ಕಬಿನಿ ಜಲಾಶಯಕ್ಕೆ ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಹೀಗಾಗಿ ಮೈಸೂರು ಹಾಗೂ ಮಂಡ್ಯ ಎರಡೂ ಜಿಲ್ಲೆಗಳು ಪ್ರವಾಹದ ಭೀತಿಗೆ ಒಳಗಾಗಿವೆ.

ಹಾಸನದಿಂದ ಮಂಡ್ಯಕ್ಕೆ ಹರಿಯುವ ಹೇಮಾವತಿ ಈಗಾಗಲೇ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಪ್ರವಾಹಕ್ಕೆ ಕೆ.ಆರ್. ಪೇಟೆ ತಾಲೂಕಿನ ಚಿಕ್ಕಮಂದಗೆರೆ ಗ್ರಾಮ ಜಲಾವೃತವಾಗಿದೆ, ಸುಮಾರು 50 ಎಕರೆಗೂ ಹೆಚ್ಚು ಕೃಷಿ ಭೂಮಿ ನೀರು ಪಾಲಾಗಿದೆ. ಹೀಗಾಗಿ ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಇನ್ನೂ ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಗಡಿಭಾಗದ ಮಚ್ಚೂರು, ವಡಕನಮಾಳ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಅಲ್ಲದೆ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಬಾವಲಿ ಚೆಕ್ಪೋಸ್ಟ್ ಸಮೀಪದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

ಹೇಮಾವತಿ ಹಾಗೂ ಕಬಿನಿಯಿಂದಾಗಿ ಮಂಡ್ಯ-ಮೈಸೂರು ಜಿಲ್ಲೆಯಲ್ಲೂ ಪ್ರವಾಹದ ಭೀತಿ ಉಂಟಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸುವುದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸುವ ಸೂಚನೆ ನೀಡುತ್ತಿದೆ.

Comments are closed.