ಕರ್ನಾಟಕ

ಪ್ರವಾಹ: ಸರ್ಕಾರಿ ವೈದ್ಯರ ರಜೆ ರದ್ದುಗೊಳಿಸಿ ಆದೇಶ!!

Pinterest LinkedIn Tumblr


ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದೆ. ಭಾರಿ ಪ್ರಮಾಣದ ಮಳೆ ಹಾಗೂ ಡ್ಯಾಂಗಳಿಂದ ನೀರು ಬಿಡುತ್ತಿರೋದರಿಂದ ಪ್ರವಾಹದ ಸ್ಥಿತಿ ಎದುರಾಗಿದ್ದು, ಜನ,ಜಾನುವಾರುಗಳು ನೀರು,ಮೇವು ಹಾಗೂ ಆಹಾರಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಹೀಗಾಗಿ ತುರ್ತು ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಎಲ್ಲಾ ಸರ್ಕಾರಿ ವೈದ್ಯರುಗಳ ರಜಾ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಹೌದು ಜಿಲ್ಲಾಕೇಂದ್ರಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಸಾರ್ವತ್ರಿಕ ಹಾಗೂ ವೈಯಕ್ತಿಕ ರಜೆಗಳನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಗದಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಬೀದರ್, ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ , ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ನೆರೆ ಹಾವಳಿ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುವ ವರೆಗೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವವರೆಗೆ ಅಧಿಕಾರಿ/ಸಿಬ್ಬಂದಿಗಳಿಗೆ ಆಗಸ್ಟ್ 9, 10,11,12 ಹಾಗೂ 15ನೇ ಆಗಸ್ಟ್ ನಿರ್ಬಂಧಿತ ರಜೆ/ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಬಾರದೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಡಕ್ ಆದೇಶ ನೀಡಿದೆ.

ಉತ್ತರ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದ್ದು, ಇದುವರೆಗೂ 6 ಜನರನ್ನು ಬಲಿ ತೆಗೆದುಕೊಂಡಿದ್ದು, 40 ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಎಲ್ಲೆಡೆ ಆರೋಗ್ಯಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದ್ದು, ಮಳೆ ಹಾಗೂ ಚಳಿಯಿಂದಾಗಿ ಜನ ರೋಗಕ್ಕಿಡಾಗುತ್ತಿದ್ದಾರೆ. ಹೀಗಾಗಿ ಯಾವುದೇ ವೈದ್ಯಕೀಯ ಸೌಲಭ್ಯ ಕೊರತೆಯಾಗಬಾರದೆಂಬ ಕಾರಣಕ್ಕೆ ವೈದ್ಯರುಗಳು ರಜೆ ಹೋಗುವಂತಿಲ್ಲ ಎಂದು ಇಲಾಖೆ ಆದೇಶಿಸಿದೆ.

Comments are closed.