ಕರ್ನಾಟಕ

ಎಚ್.ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ, ನಾನೇ ಜೆಡಿಎಸ್ ‍ಗೆ ಕರೆ ತಂದು ನಮ್ಮ ಪಕ್ಷಕ್ಕೆ ವಿಷ ಹಾಕಿಬಿಟ್ಟೆ: ಸಾ.ರಾ. ಮಹೇಶ್

Pinterest LinkedIn Tumblr

ಮೈಸೂರು: ಎಚ್.ವಿಶ್ವನಾಥ್ ರಾಜಕಾರಣದ ವ್ಯಭಿಚಾರಿ. ಆಮಿಷಕ್ಕೊಳಗಾಗಿ ಪಕ್ಷ ಬದಲಿಸುವುದು ರಾಜಕಾರಣದ ವ್ಯಭಿಚಾರ” ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಶ್ವನಾಥ್ ಅವರನ್ನು ನಾನೇ ಜೆಡಿಎಸ್ ‍ಗೆ ಕರೆ ತಂದು ನಮ್ಮ ಪಕ್ಷಕ್ಕೆ ವಿಷ ಹಾಕಿಬಿಟ್ಟೆ. ಸದನದಲ್ಲಿ ನಾನು ಅವರ ವಿರುದ್ಧ ಮಾತಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಅವರ ಜೊತೆ ಚರ್ಚೆಗೆ ಬರಲು, ದೇವಸ್ಥಾನಕ್ಕೆ ಹೋಗಲು ನಾನು ಸದಾ ಸಿದ್ಧ. ಅವರ ಜೊತೆಯೇ ಕೂತು ಅವರ ಇನ್ನಷ್ಟು ಚರಿತ್ರೆ ಬಿಚ್ಚಿಡುತ್ತೇನೆ.

ಹಕ್ಕಿ ಒಂದೊಂದು ಋತುವಿನಲ್ಲಿ ಒಂದೊಂದು ಗೂಡು ಸೇರುತ್ತದೆ. ಒಂದು ಋತುವಿನಲ್ಲಿ ವಲಸೆ ಹೋಗುತ್ತದೆ. ಲಾಭ ಎಲ್ಲಿರುತ್ತೋ ಅಲ್ಲಿಗೆ ವಲಸೆ ಹೋಗುತ್ತದೆ. ಹಾಗೇ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಕೂಡ ಎಂದರು.

ನಮ್ಮ ಪಕ್ಷದವರೇ ನನ್ನನ್ನು ವಿರೋಧಿಸಿದರೂ ಕೆ.ಆರ್ ನಗರ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿದರು. ದೇವೇಗೌಡರಿಗೆ, ಜೆಡಿಎಸ್ ‍ಗೆ ವಿಷ ಹಾಕಿದವರು ಬಹಳ ಜನ ಇದ್ದಾರೆ. ವಿಶ್ವನಾಥ್ ಪಕ್ಷಕ್ಕೆ ಕಾರ್ಕೋಟ ವಿಷ ಹಾಡಿದ್ದಾರೆ, ಅದನ್ನೆಲ್ಲ ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮ ನಾಯಕರಿಗೆ ಪಕ್ಷಕ್ಕೆ ಇದೆ.

ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಬೇಕಾದರೂ ಬರ್ತಿನಿ. ಬಹಿರಂಗ ಚರ್ಚೆಗೂ ನಾನು ಸಿದ್ಧ. ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಪಕ್ಷಕ್ಕೆ ಮೋಸ ಮಾಡಿ ಹೋಗಿಲ್ಲ. ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡ್ತೀರಾ? ನಿಮಗೆ ಆ ಧೈರ್ಯ ಇದ್ದರೆ ಬನ್ನಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿದ್ದಾರೆ.

Comments are closed.