ಕರ್ನಾಟಕ

ದೇವೇಗೌಡರ ಮನೆಗೆ ಹೋದರೆ ಕನಿಷ್ಠ ಟೀ ಕೂಡ ಕೊಡಲ್ಲ; ಅನರ್ಹ ಶಾಸಕ ನಾರಾಯಣಗೌಡ

Pinterest LinkedIn Tumblr


ಬೆಂಗಳೂರು (ಆ.03) : ಪದವಿಗಾಗಿ ಅಥವಾ ಹಣಕ್ಕಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಕ್ಷೇತ್ರದಲ್ಲಿ ನಮಗೆ ತುಂಬಾ ನೋವಿತ್ತು. ಒಬ್ಬ ಶಾಸಕನಾಗಿ ಕೆಲಸ ಮಾಡೋಕೆ ಬಿಡಲಿಲ್ಲ ಎಂದು ಕೆ.ಆರ್​.ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.

ಮತ್ತೊರ್ವ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಅವರನ್ನು ಸೆವೆನ್​ ಮಿನಿಸ್ಟರ್​ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸುಪ್ರೀಂಕೋರ್ಟ್​ ಮೇಲೆ ವಿಶ್ವಾಸವಿದೆ. ನಮ್ಮ ಪರವಾದ ತೀರ್ಪು ಬರುವ ವಿಶ್ವಾಸವಿದೆ. ಸದನ ಪ್ರಾರಂಭಕ್ಕೂ ಮುನ್ನವೇ ನಾವು ರಾಜೀನಾಮೆ ನೀಡುದ್ದೆವು. ಆದರೆ ಸ್ಪೀಕರ್ ನಮ್ಮನ್ನು ಅನರ್ಹ ಮಾಡಿದ್ದಾರೆ. ಅವರ ತೀರ್ಮಾನ ತುಂಬಾ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ಯಾವ ಪಕ್ಷಕ್ಕೆ ಹೋಗಬೇಕೆಂಬ ಬಗ್ಗೆ ತೀರ್ಮಾನಿಸಿಲ್ಲ. ನಮ್ಮ ಕಾರ್ಯಕರ್ತರನ್ನು ಮೊದಲು ಭೇಟಿ ಮಾಡಬೇಕು. ಭೇಟಿ ಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ. ಆ ಸಿಂಡಿಕೇಟ್​ಅನ್ನು ದೇವೇಗೌಡರ ಕುಟುಂಬ ಬೆಳೆಸಿದೆ. ನಾನು ಒಬ್ಬ ಶಾಸಕ ಹೋದರೆ ಕನಿಷ್ಠ ಒಂದು ಟೀ ಕೊಡಲ್ಲ ಎಂದು ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದರು.

ಕೆ.ಆರ್.ಪೇಟೆಯಲ್ಲಿ ಅವರು ಯಾರನ್ನು ಬೇಕಾದರೂ ನಿಲ್ಲಿಸಲಿ. ಅವರು ತುಂಬಾ ದೊಡ್ಡವರು. ಅವರು ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡಲ್ಲ. ನಾನೊಬ್ಬ ಒಕ್ಕಲಿಗ, ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಕ್ಕಲಿಗ ಸಮುದಾಯಕ್ಕೆ ಅಲ್ಲೊಂದು ಶಕ್ತಿ ತಂದಿದ್ದೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿಗಳ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ. ತುಂಬಾ ಸಂತೋಷ ಏನು ಬೇಕಾದರೂ ಮಾಡಲಿ. ರಮೇಶ್ ಜಾರಕಿಹೊಳಿ ನಾವು ಸ್ನೇಹಿತರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ. ಬಿಜೆಪಿ ಸೇರುವಂತೆ ನಮಗೆ ಎಲ್ಲೂ ಆಫರ್ ಬಂದಿಲ್ಲ ಎಂದು ತಿಳಿಸಿದರು.

ಜಾರಕಿಹೊಳಿ ನಿವಾಸದಲ್ಲಿ ಗರಿದೆರಿದ ರಾಜಕೀಯ ಚಟುವಟಿಕೆ
ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಬಿಎಸ್ ವೈ ಆಪ್ತ ಸಹಾಯಕ‌ ಸಂತೋಷ್, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್, ಗೋಪಾಲಯ್ಯ, ಮಾಜಿ ಶಾಸಕ ಅರವಿಂದ ಪಾಟೀಲ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣಯ್ಯ ಸೇರಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ , ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿರಲಿಲ್ಲ. ಹಾಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಣ, ಅಧಿಕಾರದಿಂದ ಹೋದವನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ದೇವರು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಹಾಕಿದ್ದೇವೆ. ಅಲ್ಲಿ ವಿಚಾರಣೆ ಬರಬೇಕು, ಆ ನಂತರ ಎಲ್ಲಿಗೆ ಹೋಗಬೇಕು, ಚುನಾವಣೆಗೆ ನಿಲ್ಲಬೇಕಾ ? ಬೇಡವಾ ? ಅನ್ನೊ ಬಗ್ಗೆ ತೀರ್ಮಾನ ಮಾಡ್ತೇನೆ. ನಾನು ನಿಲ್ಲಬೇಕಾ, ಅಥವಾ ಪುತ್ರನನ್ನ ನಿಲ್ಲಿಸಬೇಕಾ ನೋಡ್ತೇನೆ. ಈಗ ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಎಂದರು.

Comments are closed.