ಕರ್ನಾಟಕ

ಇಂದಿನ ಪರಿಸ್ಥಿತಿಗೆ ನಮ್ಮ ಕುಟುಂಬದವರು ಮಾಡಿಕೊಂಡ ಸ್ವಯಂಕೃತ ಅಪರಾಧವೇ ಕಾರಣ; ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ (ಆ.03) : ಇಂದಿನ ಪರಿಸ್ಥಿತಿಗೆ ನಾವೇ ಕಾರಣರು. ನಮ್ಮ ಕುಟುಂಬದವರು ಮಾಡಿಕೊಂಡ ಸ್ವಯಂಕೃತ ಅಪರಾಧ. ನಾನು ಇದಕ್ಕೆ ನಿಮ್ಮನ್ನು ದೂಷಿಸುವುದಿಲ್ಲ, ಇದರಲ್ಲಿ ನನ್ನದೂ ತಪ್ಪಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಗಾಗಿ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ನಮ್ಮದು ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನಿ ಕುರ್ಚಿಯವರೆಗೂ ಹೋಗಿ ಬಂದಿರೋ ಕುಟುಂಬ. ಕೆ.ಆರ್.ಪೇಟೆಗೂ ಜೆಡಿಎಸ್ ಪಕ್ಷಕ್ಕೂ ಅವಿನಾವಭಾವ ಸಂಬಂಧವಿದೆ. ಈ ಕಾರಣದಿಂದಲೇ ನಮ್ಮ ತಂದೆಗೆ ದೇವೇಗೌಡರಿಗೆ ಈ ಭಾಗದ ಮೇಲೆ ವಿಶೇಷ ಒಲವಿದೆ ಎಂದರು.

ನನಗೆ ಸಿಎಂ, ಅಧಿಕಾರ ಮುಖ್ಯ ಅಲ್ಲ. ಯಡಿಯೂರಪ್ಪ ರೀತಿ ಸಿಎಂ ಕುರ್ಚಿಗಾಗಿ ಸುಮ್ಮನೇ ಕೂರಲ್ಲ. ಸಂತೋಷದಿಂದಲೇ ಸಿಎಂ ಸ್ಥಾನ ಬಿಟ್ಟು ಬಂದಿದ್ದೇನೆ. ದೇವೇಗೌಡರಿಗೆ ಅಂದು ನಾರಾಯಣಗೌಡ ಮರಳು ಮಾಡಿದ. ಇಡೀ ಕುಟುಂಬ ಅವನ ಪರ ಇತ್ತು. ನಾನು ಅವನಿಗೆ ಬೇಡ, ಕೃಷ್ಣ ಅವರಿಗೆ ಟಿಕೆಟ್ ಕೊಡಲು ಸಿದ್ಧನಿದ್ದೆ. ನನ್ನ ತಂಗಿ ಅಂದು ನಾರಾಯಣಗೌಡನ ಚುನಾವಣೆ ಮಾಡಿದ್ರು. ಹಳ್ಳಿ ಹಳ್ಳಿ ಸುತ್ತಿ ನಾರಾಯಣಗೌಡರ ಪರ ಚುನಾವಣೆ ಪ್ರಚಾರ ಮಾಡಿದಳು. ಅವಳಿಗೆ ಈತ ಕೊಟ್ಟ ಬಳುವಳಿ ಏನು. ನನ್ನ ತಂಗಿ ಮಗಳ ಮದುವೆಗೆ ದುಡ್ಡು ಕೊಟ್ಟೆ ಅಂತಾ ಹೇಳಿಕೊಂಡು ಬಂದ ಎಂದು ನೋವು ಹೇಳಿಕೊಂಡು ಕಣ್ಣೀರಿಟ್ಟರು.

ಇಲ್ಲಿ ಜನರ ವಿಶ್ವಾಸ ಗಳಿಸಲು ನಾನು ಕಣ್ಣೀರಿಟ್ಟಿಲ್ಲ. ಎಲ್ಲಾ ಕ್ಷೇತ್ರಕ್ಕಿಂತ ಹೆಚ್ಚು ಹಣವನ್ನ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಾನು ಕೊಟ್ಟೆ. ಚುನಾವಣಾ ವೆಚ್ಚಕ್ಕಾಗಿ ಹಣ ಕೊಟ್ಟೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಹಣ ಕೊಟ್ಟೆ. ಈತ ಒಂದೇ ಒಂದು ರೂಪಾಯಿ ನನ್ನ ಕೈಗೆ ಕೊಟ್ಟಿದ್ದಾನ. ಮೃತ ರೈತರ ಕುಟುಂಬಕ್ಕೆ ಹಣ ಕೊಟ್ಟಿದ್ದಾರೆ ಅಂತಾ ಕೇಳಿ. ಆತನದ್ದು ಸುಳ್ಳಿನ ರಾಜಕೀಯ. ಅಂತಹ ಸುಳ್ಳಲ್ಲಿ ರಾಜಕೀಯ ಮಾಡಬೇಕಾದ ಅವಶ್ಯಕತೆ ನನಗಿಲ್ಲ ಎಂದರು.

ಯಡಿಯೂರಪ್ಪ ಅಧಿಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಒಕ್ಕಲಿಗ ಅಧಿಕಾರಿಗಳನ್ನ ಚೆಂಡಾಡ್ತಿದ್ದಾರೆ. ರವಿಕಾಂತೇಗೌಡರನ್ನ ಯಾಕಪ್ಪ ಎತ್ತಂಗಡಿ ಮಾಡಿದರು. ಯಾವ ತಪ್ಪು ಕೆಲಸ ಮಾಡಿದ್ದಕ್ಕೆ ತೆಗೆದರು. ಕುಮಾರಸ್ವಾಮಿ ಅಭಿಮಾನಿ ಅಂತಾ ಎತ್ತಂಗಡಿ ಮಾಡಿದರಾ ಎಂದು ಪ್ರಶ್ನೆ ಮಾಡಿದರು.

ಬಡ ಕುಟುಂಬಗಳಿಗಾಗಿ ನಾನು ರಾಜಕೀಯ ಮಾಡಿದ್ದು. ಯಡಿಯೂರಪ್ಪ ರೀತಿ ಜೈಲಿಗೋಗಲು ರಾಜಕೀಯ ಮಾಡಿಲ್ಲ. ನಿಮ್ಮ ಯಡಿಯೂರಪ್ಪನೂ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ. ಬಡ ಕುಟುಂಬಗಳ ನೆರವಿಗೆ ನನ್ನ ಬಿಟ್ಟು ಬೇರೆ ಯಾರೂ ಬರಲ್ಲ . ಶಿವರಾಮೇಗೌಡ ವಿರುದ್ಧವೂ ವಾಗ್ದಾಳಿ ಮಾಡಿದ ಮಾಜಿ ಸಿಎಂ, ಎಲ್.ಆರ್.ಶಿವರಾಮೇಗೌಡ ಲೋಕಸಭಾ ಚುನಾವಣೆ ವೇಳೆ ಅಪಪ್ರಚಾರ ಮಾಡಿದ. ಅಪ್ಪ, ಮಗನಿಂದ ನಮ್ಮ ಬಗ್ಗೆ ಅಪಪ್ರಚಾರ ಮಾಡಿದರು ಎಂದು ಆರೋಪ ಮಾಡಿದರು.

ರಾಜಕೀಯದಿಂದ ಇಷ್ಟೊತ್ತಿಗೆ ನಿವೃತ್ತಿ ಘೋಷಿಸುತ್ತಿದ್ದೆ. ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೀನಿ. ನನಗೆ ದೇವೇಗೌಡರ ರೀತಿ ಇಳಿವಯಸ್ಸಲ್ಲೂ ರಾಜಕೀಯ ಮಾಡುವ ಹಂಗಿಲ್ಲ. ಇನ್ಮುಂದೆ ಮೈತ್ರಿ ಮಾಡಿಕೊಳ್ಳಲ್ಲ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಕಾರ್ಯಕರ್ತರಿಗೆ ಅಭಯ ನೀಡಿದರು.

Comments are closed.