ಕರ್ನಾಟಕ

‘ಅನರ್ಹತೆ’ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋದ ಅನರ್ಹ ಶಾಸಕರು; ಮುಂದೆ ಏನಾಗುತ್ತೆ…?

Pinterest LinkedIn Tumblr

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸರ್ಕಾರ ಪತನಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಅನರ್ಹಗೊಂಡ ಶಾಸಕರು ಸ್ಪೀಕರ್‌ ಅವರ ಅನರ್ಹತೆಯ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ವಕೀಲರ ಮೂಲಕ ಅರ್ಜಿ ಹಾಕಿದ್ದೇವೆ. ಏನೇನು ಅಂಶಗಳನ್ನು ದಾಖಲಿಸಿದ್ದಾರೆ ಗೊತ್ತಿಲ್ಲ. ಸ್ಪೀಕರ್ ನಮಗೆ ನ್ಯಾಯ ಕೊಟ್ಟಿಲ್ಲ. ಹೀಗಾಗಿ ಮತ್ತೊಮ್ಮೆ ಸ್ಪೀಕರ್ ಮುಂದೆ ಹೋಗುವ ಅವಕಾಶ ನೀಡಬೇಕು ಎನ್ನುವುದು ನಮ್ಮ ವಾದ. ಇದು ಏಕಪಕ್ಷೀಯ ನಿರ್ಧಾರ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ. ನ್ಯಾಯಾಲಯದ ಅದೇಶದ ಬಳಿಕ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ದೆಹಲಿಯಲ್ಲಿ ಅನರ್ಹ ಶಾಸಕ ಪ್ರತಾಪ ಗೌಡ ಪಾಟೀಲ್ ಹೇಳಿದ್ದಾರೆ.

ಈಗಾಗಲೇ ರಮೇಶ್ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಮತ್ತು ಆರ್‌. ಶಂಕರ್ ಅರ್ಜಿ ಸಲ್ಲಿಸಿದ್ದು, ಇನ್ನುಳಿದ ಜೆಡಿಎಸ್‌ನ ಶಾಸಕರಾದ ಎಚ್‌.ವಿಶ್ವನಾಥ್‌, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ ಮತ್ತು ಕಾಂಗ್ರೆಸ್‌ನ ಶ್ರೀಮಂತ ಪಾಟೀಲ, ಪ್ರತಾಪಗೌಡ ಪಾಟೀಲ್‌, ಶಿವರಾಂ ಹೆಬ್ಬಾರ್‌, ಬಿ.ಸಿ.ಪಾಟೀಲ, ಆನಂದ್‌ ಸಿಂಗ್‌, ಡಾ.ಕೆ.ಸುಧಾಕರ್‌, ಬಿ.ಎ.ಬಸವರಾಜ, ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ರೋಷನ್‌ ಬೇಗ್‌ ಹಾಗೂ ಎಂ.ಟಿ.ಬಿ.ನಾಗರಾಜ್‌ ಅವರು ಇಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.

ಮತ್ತೊಂದೆಡೆ ಅನರ್ಹಗೊಂಡಿರುವ 11 ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ ಮೊದಲು ನಮಗೆ ನೋಟಿಸ್ ನೀಡಿದ ನಂತರ ಮಧ್ಯಂತರ ಆದೇಶ ಹೊರಡಿಸುವಂತೆ ಮನವಿ ಮಾಡಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದಾರೆ.

Comments are closed.