ಕರ್ನಾಟಕ

ಕಾಫಿ ಡೇ ಹಂಗಾಮಿ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್​.ವಿ ರಂಗನಾಥ್​ ನೇಮಕ

Pinterest LinkedIn Tumblr


ಬೆಂಗಳೂರು (ಜು.31): ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ ಹೆಗ್ಡೆ ಸಾವು ಇಡೀ ದೇಶಕ್ಕೆ ದಿಗ್ಭ್ರಮೆ ಮೂಡಿಸಿದೆ. ಸಾವಿರಾರು ಕೋಟಿ ಒಡೆತನದ ಕೆಫೆ ಕಾಫಿ ಡೇ ಮಾಲೀಕರನ್ನು ಕಳೆದುಕೊಂಡ ನಂತರ ತುರ್ತು ಸಭೆ ಕರೆದ ಕಾಫಿ ಡೇ ಆಡಳಿತ ಮಂಡಳಿ ಸದ್ಯ ಹಂಗಾಮಿ ಅಧ್ಯಕ್ಷರನ್ನಾಗಿ ಎಸ್​ವಿ ರಂಗನಾಥ್​ ಅವರನ್ನು ನೇಮಕ ಮಾಡಿದೆ. ಎಸ್​ ವಿ ರಂಗನಾಥ್​ ಕರ್ನಾಟಕ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ. ಇವರ ಜತೆಗೆ ಬಾಗ್ಮನೆ ಟೆಕ್​ ಪಾರ್ಕ್​ ಮಾಲೀಕ ನಿತಿನ್​ ಬಾಗ್ಮನೆ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.

ಸಿದ್ದಾರ್ಥ ಸಾವಿನ ಹಿನ್ನೆಲೆ ಇಂದು ತುರ್ತು ಸಭೆ ನಡೆಸಿದ ಕಾಫಿ ಡೇ ಮಂಡಳಿ ಈ ನಿರ್ಧಾರವನ್ನು ಪ್ರಕಟಿಸಿದೆ.

ಮಂಡಳಿಯ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿತಿನ್​ ಬಾಗ್ಮನೆಯವರನ್ನು ನೇಮಕ ಮಾಡಲಾಗಿದೆ.

ಕೋಟ್ಯಾಂತರ ರೂ ವಹಿವಾಟು ಹೊಂದಿರುವ ಮಂಡಳಿಯ ವ್ಯವಹಾರವನ್ನು ಮುಂದುವರೆಸುವ ಕುರಿತು ಸಿದ್ಧಾರ್ಥ್​​ ಹೆಂಡತಿ ಮಾಳವಿಕಾ ಮಂಡಳಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೋರ್ಡ್​​ನ ಸಭೆ ನಡೆಸಿ ಈ ತೀರ್ಮಾನ ಕೈ ಗೊಳ್ಳಲಾಗಿತ್ತು. ಕಂಪನಿ ಭವಿಷ್ಯ ಹಾಗೂ ಉದ್ಯೋಗಿಗಳ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದು ಈ ತೀರ್ಮಾನವನ್ನು ಬೆಂಬಲಿಸುವುದಾಗಿ ಮಾಳವಿಕಾ ತಿಳಿಸಿದ್ದಾರೆ.

ಕಂಪನಿ ಮಂಡಳಿ ತೆಗೆದುಕೊಂಡಿರುವ ನಿರ್ಧಾರದಂತೆ ಅಧಿಕಾರ ನಿರ್ವಹಿಸಲು ರಂಗನಾಥ್​ ಮತ್ತು ಮಂಡಳಿ ಸಮ್ಮತಿಸಿದೆ. ಜೊತೆಗೆ ಸಭೆಯಲ್ಲಿ ಸಾವಿಗೆ ಮುನ್ನ ಸಿದ್ಧಾರ್ಥ್ ಬರೆದಿದ್ದು ಎನ್ನಲಾದ ಪತ್ರದಲ್ಲಿನ ವಿಷಯಗಳನ್ನು ಗಂಭೀರವಾಗಿ ಪರಿಗಣನೆ ಮಾಡಿ ಅದರ ಮೇಲೂ ಆಂತರಿಕವಾಗಿ ತನಿಖೆ ನಡೆಸಬೇಕು ಎಂದು ಮಂಡಳಿ ನಿರ್ಧರಿಸಿದೆ.

ಮುಂದಿನ ಮಂಡಳಿ ಸಭೆಯನ್ನು ಆಗಸ್ಟ್​ 8ರಂದು ನಿಗದಿಗೊಳಿಸಲಾಗಿದ್ದು ಅಲ್ಲಿಯವರೆಗೂ ರಂಗನಾಥ್​ ಮತ್ತು ನಿತಿನ್​ ಬಾಗ್ಮನೆ ಅವರೇ ಸಂಸ್ಥೆಯ ಮುಂದಾಳತ್ವ ವಹಿಸಲಿದ್ದಾರೆ. ಅಂದಿನ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ಸಂಸ್ಥೆಯ ಮುಂದಿನ ನಡೆಯನ್ನು ತೀರ್ಮಾನಿಸಬೇಕೆಂದು ಸೂಚಿಸಲಾಗಿದೆ

ಆಡಳಿತ ಸಂಸ್ಥೆ ಹಂಗಾಮಿ ಅಧ್ಯಕ್ಷರಾಗಿರುವ ಎಸ್​ವಿ ರಂಗನಾಥ್​ ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿ ಎಂಬ ಹೆಸರಿಗೂ ಪಾತ್ರರಾಗಿದ್ದರು. ನಿವೃತ್ತಿಯ ನಂತರ ಎರಡು ಬಾರಿ ಸೇವಾವಧಿಯನ್ನು ಸರ್ಕಾರವೇ ಹೆಚ್ಚು ಮಾಡಿದ್ದು ಅವರ ಸೇವೆಗೆ ಹಿಡಿದ ಕನ್ನಡಿಯಾಗಿದೆ.

Comments are closed.