ಕರ್ನಾಟಕ

ಸಿದ್ದಾರ್ಥ್ ಕಣ್ಮರೆ ಕುರಿತು ರಾಜಕೀಯ ನಾಯಕರು ಕಿಡಿಕಾರಿದ್ದು ಹೀಗೆ..?

Pinterest LinkedIn Tumblr

ಬೆಂಗಳೂರು: ಸಿದ್ದಾರ್ಥ್ ಹೆಗಡೆ ನಾಪತ್ತೆಯಾಗಿ ದಿನವೇ ಕಳೆದಿದರು ಇನ್ನೂ ಪತ್ತೆಯಾಗಿಲ್ಲ, ಇತ್ತ ಬೆಂಗಳೂರಿನ ಎಸ್.ಎಂ.ಕೃಷ್ಣ ನಿವಾಸದಲ್ಲಿ ಆತಂಕ ಮಡುಗಟ್ಟಿದ್ದು, ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರು ಸಿದ್ದಾರ್ಥ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನಲ್ಲೇ ಎಸ್.ಎಂ.ಕೃಷ್ಣ ವಿಶ್ರಾಂತಿ ಪಡೆಯುತ್ತಿದ್ದು, ಬೆಳ್ಳಂಬೆಳಗ್ಗೆ ಸದಾಶಿವನಗರದ ನಿವಾಸಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದ್ದರು. ಸಿದ್ದಾರ್ಥ್ ನಾಪತ್ತೆಯಾದ ಕೂಡಲೇ ಮಾಹಿತಿ ಪಡೆದಿದ್ದ ಸಿಎಂ ಬಿಎಸ್‌ವೈ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷಣ-ಕ್ಷಣದ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಗುಪ್ತಚರ ಇಲಾಖೆ ಐಜಿಪಿ ದಯಾನಂದ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜುರನ್ನು ಕರೆಸಿಕೊಂಡು ಚರ್ಚಿಸಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಕೂಡ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ್ದರು. ಆದಾಯ ತೆರಿಗೆ ಇಲಾಖೆ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ, ಸಿದ್ದಾರ್ಥ್ ಕಣ್ಮರೆ ನೋವುಂಟು ಮಾಡಿದೆ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೂಡ ಐಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಾಳೆ ಅಥವಾ ನಾಡಿದ್ದು ಸಿದ್ದಾರ್ಥ್‌ರನ್ನ ಭೇಟಿ ಮಾಡಬೇಕು ಎಂದುಕೊಂಡಿದ್ದೆ, ಅಷ್ಟ್ರಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಮ್ಮ ಕೆಲಸ ಮಾಡುತ್ತಿದ್ದು, ಮುಂದೇನಾಗುತ್ತೋ ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಅಲ್ಲದೇ ಟ್ವೀಟ್‌ನಲ್ಲೂ ಐಟಿ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಐಟಿ ವಿರುದ್ಧವೇ ಕಿಡಿ ಕಾರಿದ್ದಾರೆ.

ಎಸ್.ಎಂ.ಕೃಷ್ಣ ನಿವಾಸಕ್ಕೆ ಬಿಜೆಪಿ ಮುಖಂಡರೂ ಭೇಟಿ ನೀಡಿದ್ದರು. ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಕ್ರಿಕೆಟಿಗ ಅನಿಲ್ ಕೂಡ ಸಿದ್ದಾರ್ಥ್ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಅಲ್ಲದೇ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಎಸ್.ಟಿ.ಸೋಮಶೇಖರ್, ಎಂ.ಟಿ.ಬಿ.ನಾಗರಾಜ್, ಶಿವರಾಮ್ ಹೆಬ್ವಾರ್, ಬೈರತಿ ಬಸವರಾಜ್ ಕೂಡ ಭೇಟಿ ನೀಡಿದ್ದರು.

ಸಿದ್ದಾರ್ಥ್ ಹೆಗಡೆ ಕಣ್ಮರೆಯಾಗಿ 24 ಗಂಟೆಗಳೇ ಕಳೆದಿವೆ. ಅತ್ತ ಶೋಧ ಕಾರ್ಯಾಚರಣೆ ನಿರಂತರವಾಗಿ ಸಾಗ್ತಿದ್ದು, ಸಿದ್ದಾರ್ಥ್ ಹೆಗಡೆ ಕ್ಷೇಮವಾಗಿ ಹಿಂತಿರುಗಲಿ ಅಂತ ಎಲ್ಲರು ಪ್ರಾರ್ಥಿಸುತ್ತಿದ್ದಾರೆ.

Comments are closed.