ಕರ್ನಾಟಕ

ಇವರೇ ಉಪ ಮುಖ್ಯಮಂತ್ರಿ, ಶುಕ್ರವಾರವೇ ಅಧಿಕಾರ ಸ್ವೀಕಾರ

Pinterest LinkedIn Tumblr

ಬೆಂಗಳೂರು: ಬಿಜೆಪಿ ರಣತಂತ್ರ ಕೊನೆಗೂ ಫಲ ನೀಡಿದೆ. ಸ್ವಂತ ಬಲದ ಮೇಲೆ ಬಿಜೆಪಿ ಆಧಿಕಾರದ ಚುಕ್ಕಾಣಿ ಹಿಡಿದಿದೆ. ಬಿ.ಎಸ್. ಯಡಿಯೂರಪ್ಪ ತಮ್ಮ ಮಹತ್ವಾಕಾಂಕ್ಷೆಯಂತೆ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರದ ಆಧಿವೇಶನದಲ್ಲಿ ಸರ್ಕಾರದ ಹಣಕಾಸು ವಿಧೇಯಕಕ್ಕೂ ಮಂಡನೆ ದೊರೆತಿದೆ. ಅಲ್ಲಿಗೆ ಮುಂದಿನ ಆರು ತಿಂಗಳು ಬಿಜೆಪಿ ಸರ್ಕಾರ ಬಾಹ್ಯ ದಾಳಿಗಳಿಂದ ನಿರಾಳವಾದಂತಾಗಿದೆ.

ಇನ್ನೇನಿದ್ದರೂ ಬಿಜೆಪಿ ನಾಯಕರ ಮುಂದಿರುವ ದೊಡ್ಡ ಸವಾಲು ಪಕ್ಷದೊಳಗಿನ ಸಂಭಾವ್ಯ ದಾಳಿಗಳನ್ನು ತಪ್ಪಿಸುವುದು. ಆ ಮೂಲಕ ಸ್ಥಿರ ಆಡಳಿತ ನೀಡುವುದು. ಆದರೆ, ಅದು ಅಷ್ಟು ಸುಲಭದ ವಿಚಾರವಲ್ಲ ಎಂಬುದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ತಿಳಿದಿದೆ.

ಶುಕ್ರವಾರ ಸಂಜೆ 6.30ಕ್ಕೆ ರಾಜಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿ.ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದ ಮತ್ತೊಂದು ವಿಚಾರ ಎಂದರೆ ಯಾರ್ಯಾರಿಗೆ ಸಚಿವ ಸ್ಥಾನ? ಡಿಸಿಎಂ ಹುದ್ದೆ ಎಷ್ಟು ಮತ್ತು ಯಾರಿಗೆ? ಎಂಬುದು.

ಅಸಲಿಗೆ ಬಿಜೆಪಿಯಲ್ಲಿ ಮಂತ್ರಿ ಸ್ಥಾನಗಳಿಗಿಂತ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಮೈತ್ರಿ ಸರ್ಕಾರವನ್ನು ಬೀಳಿಸಿದಷ್ಟು ಪಕ್ಷದೊಳಗಿನ ಸಚಿವ ಸ್ಥಾನ ಆಕಾಂಕ್ಷಿಗಳನ್ನು ನಿಭಾಯಿಸುವುದು ಸುಲಭವಲ್ಲ. ಹೀಗಾಗಿ ಸಚಿವ ಸಂಪುಟ ರಚನೆ ಹಾಗೂ ಮುಂದಿನ ಡಿಸಿಎಂ ಯಾರು? ಎಂಬುದು ಪ್ರಸ್ತುತ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಯಡಿಯೂರಪ್ಪ ಸಚಿವ ಸ್ಥಾನಗಳನ್ನು ಜಾತಿವಾರು ಪ್ರಾಶಸ್ತ್ಯದ ಮೇಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನಕ್ಕೆ ಒಂದಷ್ಟು ಸಂಭಾವ್ಯ ಹೆಸರುಗಳು ಚಾಲ್ತಿಯಲ್ಲಿವೆ.

ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಈಶ್ವರಪ್ಪ, ಆರ್. ಅಶೋಕ್ ಮತ್ತು ಶ್ರೀರಾಮುಲು ಹಾಗೂ ಜಾತಿ ಲೆಕ್ಕಾಚಾರ:

ಬಿಜೆಪಿಯಲ್ಲಿ ಯಡಿಯೂರಪ್ಪ ಖಾಯಂ ಸಿಎಂ ಅಭ್ಯರ್ಥಿ. ಹೀಗಾಗಿ ಅವರು ಈಗಾಗಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಡಿಸಿಎಂ ಯಾರು? ಎಂಬುದು ಪ್ರಸ್ತುತ ಎದ್ದಿರುವ ದೊಡ್ಡ ಪ್ರಶ್ನೆ.

2008ರಲ್ಲಿ ಬಿಜೆಪಿ ಅಧಿಕಾರ ಪಡೆದಾಗ ಕೊನೆಯ ಒಂದು ವರ್ಷದ ಅವಧಿಗೆ ಮಾತ್ರ ಎರಡು ಡಿಸಿಎಂ ಹುದ್ದೆಯನ್ನು ಸೃಷ್ಠಿಸಲಾಗಿತ್ತು. ಲಿಂಗಾಯಿತ ಸಮಾಜದ ಜಗದೀಶ್ ಶೆಟ್ಟರ್ ಸಿಎಂ ಆಗಿದ್ರೆ, ಒಕ್ಕಲಿಗ ಸಮಾಜದ ಆರ್. ಅಶೋಕ್ ಹಾಗೂ ಕುರುಬ ಸಮಾಜದ ಕೆ.ಎಸ್. ಈಶ್ವರಪ್ಪ ಡಿಸಿಎಂ ಆಗಿದ್ದರು.

ಈ ಬಾರಿ ಲಿಂಗಾಯಿತ ಸಮಾಜದ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗಾಗಿ ಜಾತಿಯ ಆಧಾರದ ಮೇಲೆ ಡಿಸಿಎಂ ಹುದ್ದೆಗೆ ಈಶ್ವರಪ್ಪ, ಆರ್. ಅಶೋಕ್ ಹಾಗೂ ಶ್ರೀರಾಮುಲು ನಡುವೆ ಭಾರೀ ಪೈಪೋಟಿ ಇದೆ ಎನ್ನಲಾಗುತ್ತಿದೆ.

ಕೆ.ಎಸ್. ಈಶ್ವರಪ್ಪ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ. ಮಾಜಿ ಡಿಸಿಎಂ ಆಗಿ ಕೆಲಸ ಮಾಡಿದ ಅನುಭವಿ ಹಾಗೂ ಬಿಜೆಪಿ ಪಕ್ಷದ ಏಕೈಕ ಕುರುಬ ಸಮಾಜದ ನಾಯಕ. ಕುರುಬ ಸಮಾಜ ಸಿದ್ದರಾಮಯ್ಯನವರ ನಂತರ ಈಶ್ವರಪ್ಪನನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದೆ. ಹೀಗಾಗಿ ರಾಜ್ಯದ ಮೂರನೇ ದೊಡ್ಡ ಸಮಾಜವಾದ ಕುರುಬ ಸಮಾಜದ ಓಲೈಕೆಗಾಗಿ ಈಶ್ವರಪ್ಪ ಡಿಸಿಎಂ ಹುದ್ದೆ ಅಲಂಕರಿಸುವುದು ಖಚಿತ ಎನ್ನಲಾಗುತ್ತಿದೆ.

ಆದರೆ, ಒಕ್ಕಲಿಗ ಸಮಾಜದ ಆರ್. ಅಶೋಕ್ ಸಹ ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರು. ಆಪರೇಷನ್ ಕಮಲದ ಮೂಲಕ ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮಾಣವಾಗಿರುವ ಹಿಂದೆ ಆರ್. ಅಶೋಕ್ ಪಾತ್ರ ನಿರ್ಣಾಯಕ ಎನ್ನಲು ಅಡ್ಡಿಯಿಲ್ಲ. ಅಲ್ಲದೆ ಇವರಿಗೂ ಸಹ ಡಿಸಿಎಂ ಹುದ್ದೆಯನ್ನು ನಿಭಾಯಿಸಿದ ಅನುಭವದ ಜೊತೆಗೆ ಪ್ರಬಲ ಒಕ್ಕಲಿಗ ಸಮಾಜದವರು ಎಂಬ ಬಲ ಬೆನ್ನಿಗಿದೆ.

ಇದರ ಜೊತೆಗೆ ಯಡಿಯೂರಪ್ಪ, ಈಶ್ವರಪ್ಪ ನಂತರ ಸಾಲಿನಲ್ಲಿ ಗುರುತಿಸಿಕೊಂಡಿರುವ ಹಿರಿಯ ನಾಯಕ ಎಂಬ ಹೆಗ್ಗಳಿಕೆಯೂ ಇವರಿಗಿದೆ. ಹೀಗಾಗಿ ಅಶೋಕ್ ಡಿಸಿಎಂ ಹುದ್ದೆಯನ್ನು ಅಲಂಕರಿಸುವುದು ಬಹುತೇಕ ಖಚಿತ. ಕಳೆದ ಬಾರಿಯಂತೆ ಈ ಬಾರಿಯೂ 2 ಡಿಸಿಎಂ ಹುದ್ದೆಯನ್ನು ಸೃಷ್ಟಿ ಮಾಡಲಾಗುವುದು. ಈಶ್ವರಪ್ಪ ಹಾಗೂ ಆರ್. ಅಶೋಕ್ ಇಬ್ಬರನ್ನೂ ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹೀಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ಹಾಗೂ ಆರ್. ಅಶೋಕ್ ಹೆಸರು ಎಡತಾಕುತ್ತಿದ್ದರೆ, ಈ ನಡುವೆ ಕೇಳಿ ಬರುತ್ತಿರುವ ಮತ್ತೊಂದು ಪ್ರಮುಖ ಹೆಸರು ಮಾಜಿ ಸಚಿವ ಶ್ರೀರಾಮುಲು.

ಶ್ರೀ ರಾಮುಲುಗೆ ಒಲಿಯುತ್ತಾ ಡಿಸಿಎಂ ಪಟ್ಟ?

ಬಿಜೆಪಿ ಮೂಲಕ 2008ರಲ್ಲಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದು ಕೇವಲ ಒಂದು ದಶಕದ ಅವಧಿಯಲ್ಲಿ ಬಿಜೆಪಿ ಟ್ರಬಲ್ ಶೂಟರ್ ಎಂದು ಖ್ಯಾತಿ ಪಡೆದಿರುವ ಶ್ರೀರಾಮುಲು ಇಂದು ಬಿಜೆಪಿಯ ನಿರ್ಣಾಯಕ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕೆ ಅವರು ಈ ಬಾರಿಯ ಡಿಸಿಎಂ ಹುದ್ದೆಯ ಪ್ರಮುಖ ಆಕಾಂಕ್ಷಿಯೂ ಹೌದು.

ಕಳೆದ ವಿಧಾನಸಭಾ ಚುನಾವಣೆಯ ವೇಳೆಯೇ ಅವರಿಗೆ ಯಡಿಯೂರಪ್ಪ ಡಿಸಿಎಂ ಹುದ್ದೆ ನೀಡುವ ಭರವಸೆ ನೀಡಿದ್ದರು. ಅಲ್ಲದೆ, ಪ್ರಬಲ ವಾಲ್ಮೀಕಿ ಸಮಾಜ ಶ್ರೀರಾಮುಲು ಬೆನ್ನಿಗಿದೆ. ಹಿಂದುಳಿದ ಈ ಸಮಾದ ಅಭಿವೃದ್ಧಿಗೆ ಎಲ್ಲೆಡೆಯಿಂದ ಕೂಗು ಸಹ ಕೇಳಿಬರುತ್ತಿದೆ. ಹೀಗಾಗಿ ಡಿಸಿಎಂ ಹುದ್ದೆಗ ಶ್ರೀರಾಮುಲು ಅವರನ್ನು ಅರಸಿ ಬಂದರೂ ಅಚ್ಚರಿ ಇಲ್ಲ.

ಈ ನಡುವೆ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಅರವಿಂದ ಲಿಂಬಾವಳಿ ಸಹ ಈ ಪಟ್ಟಿಯಲ್ಲಿ ಇದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಹಾಗೂ ಯಡಿಯೂರಪ್ಪ ಎಷ್ಟು ಡಿಸಿಎಂ ಹುದ್ದೆಗಳನ್ನು ಸೃಷ್ಠಿಸಲಿದ್ದಾರೆ. ಯಾರ್ ಯಾರು ಡಿಸಿಎಂ ಹುದ್ದೆಯನ್ನು ಅಲಂಕರಿಸಲಿದ್ದಾರೆ? ಅಥವಾ ಆಂಧ್ರಪ್ರದೇಶದ ಸಿಎಂ ಜಗಮೋಹನ್ ರೆಡ್ಡಿಯಂತೆ ಎಲ್ಲಾ ಸಮಾಜಕ್ಕೂ ಪ್ರಾಶಸ್ತ್ಯ ನೀಡುವ ಸಲುವಾಗಿ 5ಕ್ಕೂ ಹೆಚ್ಚು ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಿದ್ದಾರ? ಎಂಬುದನ್ನು ಕಾದು ನೋಡಬೇಕಿದೆ.

Comments are closed.