ಕರ್ನಾಟಕ

ಗುಮಾಸ್ತಗಿರಿಯಿಂದ ಸಿಎಂ ಹುದ್ದೆಯವರೆಗೆ ಯಡಿಯೂರಪ್ಪ!

Pinterest LinkedIn Tumblr


ಕರ್ನಾಟಕದ ಮಟ್ಟಿಗೆ ಛಲ ಹಾಗೂ ಹೋರಾಟದ ಮೂಲಕವೇ ಸಾರ್ವಜನಿಕ ಜೀವನದಲ್ಲಿ ವಿಶಿಷ್ಠವಾಗಿ ಗುರುತಿಸಿಕೊಂಡ ಜನನಾಯಕರ ಪೈಕಿ ಬಿಜೆಪಿ ಪಕ್ಷದ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ಅಗ್ರಗಣ್ಯ.

80ರ ದಶಕದಲ್ಲಿ ಭಾರತೀಯ ಜನಸಂಘ ಬಿಜೆಪಿ ಪಕ್ಷವಾಗಿ ರೂಪುಗೊಂಡಾಗ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಆಗಿನ್ನು ಗಟ್ಟಿ ನೆಲೆ ಇರಲಿಲ್ಲ. ಶಾಸಕ ಸಂಸದರಿರಲಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಕಾರ್ಯಕರ್ತರೂ ಸಹ ಇಲ್ಲದ ಪರಿಸ್ಥಿತಿ ಇತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಅದೇ ಪಕ್ಷ 2008ರ ವೇಳೆಗೆ ಕೇವಲ 3 ದಶಕಗಳ ಅಂತರದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಅದು ಸಾಮಾನ್ಯವಾದ ವಿಚಾರವಲ್ಲ.

ಅಂದಿನಿಂದ ಇಂದಿನ ವರೆಗೆ ಬಿಜೆಪಿಯ ಈ ಯಶಸ್ಸಿನ ಹಿಂದಿದ್ದ ಏಕೈಕ ಹೆಸರು ಎಂದರೆ ಬಿ.ಎಸ್. ಯಡಿಯೂರಪ್ಪ. ಆರ್​​ಎಸ್​ಎಸ್​ ಮೂಲಕ ಬಿಜೆಪಿ ಪ್ರವೇಶಿಸಿ 1983ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸಿದ ಅವರು ನಂತರ ಹಿಂದೆ ತಿರುಗಿ ನೋಡಿದ್ದೇ ಇಲ್ಲ.

ನೆನಪಿರಲಿ 1983ರಲ್ಲಿ ರಾಜ್ಯದಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದವರು ಕೇವಲ 18 ಜನ ಮಾತ್ರ. ಆದರೆ, ಕೇವಲ 3 ದಶಕಗಳ ಹಿಂದೆ 18 ಶಾಸಕರನ್ನು ಹೊಂದಿದ್ದ ಅದೇ ಪಕ್ಷ 2008ರಲ್ಲಿ ಸ್ವಂತ ಬಲದಲ್ಲಿ ಸರ್ಕಾರ ರಚಿಸಿತ್ತು. ಯಡಿಯೂರಪ್ಪ ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 2019ರಲ್ಲೂ ಸಹ ಬಿಜೆಪಿ ಇನ್ನೇನು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ರಾಜಕೀಯ ರಂಗಪ್ರವೇಶ ಮತ್ತು ರಾಜಕೀಯದಲ್ಲಿ ಕ್ರಮಿಸಿದ ಅತಿರಂಜಕ ಹಾದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಗುಮಾಸ್ತಗಿರಿ ಮುಖ್ಯಮಂತ್ರಿ ಗಾದಿಯವರೆಗೆ

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದ ಯಡಿಯೂರಪ್ಪ 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ತನ್ನ ವೃತ್ತಿ ಜೀವನ ಆರಂಭಿಸಿದ್ದರು. ಆದರೆ, ಈ ಕೆಲಸವನ್ನು ತ್ಯಜಿಸಿದ್ದ ಅವರು ಶಿಕಾರಿಪುರಕ್ಕೆ ತೆರಳಿ ವೀರಭದ್ರ ಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ನಂತರ ಶಿವಮೊಗ್ಗದಲ್ಲೊಂದು ಹಾರ್ಡ್​ವೇರ್ ಅಂಗಡಿಯನ್ನೂ ತೆರೆದರು. ಆದರೆ, ಅಂದೇ ಅವರಿಗೆ ತನ್ನ ಭವಿಷ್ಯ ಇರುವುದು ರಾಜಕೀಯದಲ್ಲಿ ಎಂಬುದು ಸ್ಪಷ್ಟವಾಗಿತ್ತು.

1970ರಲ್ಲಿ ಆರ್​​ಎಸ್​ಎಸ್​ ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಯಡಿಯೂರಪ್ಪ ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿಯೂ ನೇಮಕಗೊಂಡರು. 1972ರಲ್ಲಿ ಶಿಕಾರಿಪುರ ನಗರ ಪಾಲಿಕೆಗೆ ಚುನಾಯಿತರಾದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸವನ್ನೂ ಅವರು ಅನುಭವಿಸಿದ್ದರು.

1985ರಲ್ಲಿ ಶಿವಮೊಗ್ಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, 1988ರಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನಾದರು. 1999ರ ಚುನಾವಣೆಯಲ್ಲಿ ಸೋಲನುಭವಿಸಿದರೂ ವಿಧಾನ ಪರಿಷತ್​ಗೆ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಸಿದ ಯಡಿಯೂರಪ್ಪ ಈವರೆಗೆ 8 ಬಾರಿ ವಿಧಾನಸಭೆಗೆ ಮತ್ತು 1 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಅವರ ಮತ್ತೊಂದು ಸಾಧನೆ. ಈ ಚುನಾವಣೆಯ ಬಳಿಕವೇ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೆ ಏರುವ ಮೂಲಕ ಬಿಜೆಪಿ ಪಕ್ಷದಲ್ಲಿ ಮತ್ತೆ ಯಾರೂ ನಿರ್ಮಿಸಲಾಗದ ಇತಿಹಾಸವೊಂದನ್ನು ನಿರ್ಮಿಸಿದ್ದು. ಆದರೆ, ಈ ದಶಕ ಬಿಎಸ್​ವೈಗೆ ಎಷ್ಟರ ಮಟ್ಟಿಗೆ ಸಿಹಿ ನೀಡಿತ್ತೋ ಅಷ್ಟೇ ನೋವನ್ನೂ ನೀಡಿತ್ತು ಎಂಬುದೂ ನಿಜ.

ಸಿಎಂ ಆದರೂ ಪೂರ್ಣಾವಧಿ ಮುಗಿಸದೆ ಜೈಲು ಪಾಲಾಗಿದ್ದ ಬಿಎಸ್​ವೈ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಧರಂ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು 2006ರಲ್ಲಿ ಜೆಡಿಎಸ್ ವಾಪಸ್ ಪಡೆದ ನಂತರ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮೊದಲ ಬಾರಿಗೆ ಯಡಿಯೂರಪ್ಪ ಈ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ದಶಕಗಳ ಹೋರಾಟದ ನಂತರ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಸಿಹಿ ಉಂಡಿತ್ತು.

ಆದರೆ, ಒಪ್ಪಂದದಂತೆ 20 ತಿಂಗಳ ನಂತರ ಕುಮಾರಸ್ವಾಮಿ 2007 ಅಕ್ಟೋಬರ್​ನಲ್ಲಿ ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರು. ಈ ಹಿನ್ನೆಲೆ ರಾಜ್ಯದಾದ್ಯಂತ ಭಾರಿ ಗದ್ದಲವೇ ಶುರುವಾಗಿತ್ತು. ಅಲ್ಲದೆ ಜೆಡಿಎಸ್​ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದಾಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ತದನಂತರ ಮತ್ತೆ ಎರಡು ಪಕ್ಷಗಳ ನಡುವಿನ ಭಿನ್ನಮತ ಶಮನಗೊಂಡು ನವೆಂಬರ್ 12. 2007ರಂದು ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮೂಲಕ ದಕ್ಷಿಣ ಭಾರತದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಆದರೆ, ಸಚಿವರಿಗೆ ಖಾತೆ ಹಂಚಿಕೆ ವೇಳೆ ಮತ್ತೆ ಉಲ್ಭಣಗೊಂಡ ಭಿನ್ನಮತದಿಂದಾಗಿ ಮೈತ್ರಿ ಸರ್ಕಾರ ಅದೇ ವರ್ಷ ನವೆಂಬರ್ 19ರಂದು ಪತನವಾಗಿದ್ದು ಮಾತ್ರ ದುರಂತ. ಹೀಗೆ ಮೊದಲ ಬಾರಿಗೆ ಸಿಎಂ ಹುದ್ದೆಗೆ ಏರಿದ್ದ ಯಡಿಯೂರಪ್ಪ ಕೇವಲ 7 ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗುವ ವ್ಯಕ್ತಿತ್ವ ಅವರದ್ದಲ್ಲ ಎಂಬುದು ನಂತರ ಇತಿಹಾಸವೇ ಸಾರಿ ಹೇಳುತ್ತದೆ.

2008ರಲ್ಲಿ ಬಿಜೆಪಿ ಅಲೆಯನ್ನೇ ಸೃಷ್ಟಿಸಿ ಮತ್ತೆ ಗೆದ್ದ ಯಡಿಯೂರಪ್ಪ!

ಬಿಜೆಪಿ-ಜೆಡಿಎಸ್ ಮೈತ್ರಿ 2007ರಲ್ಲಿ ಮುರಿದು ಬಿದ್ದ ನಂತರ ರಾಜ್ಯದ್ಯಂತ ಬಿಜೆಪಿ ಹಾಗೂ ಯಡಿಯೂರಪ್ಪನವರ ಕುರಿತು ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಪರಿಣಾಮ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ನಂತರ ಆಪರೇಷನ್ ಕಮಲದ ಸಹಾಯದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಸ್ವಂತ ಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು.

ಆದರೆ, ಆಗಲೂ ಅವರನ್ನು ಪೂರ್ಣಾವಧಿಗೆ ಅಧಿಕಾರ ಚಲಾಯಿಸಲು ಸ್ವಪಕ್ಷೀಯರೇ ಬಿಟ್ಟಿರಲಿಲ್ಲ. ಸರ್ಕಾರ ಒಂದು ವರ್ಷ ಪೂರೈಸುವ ಒಳಗಾಗಿ ಅವರ ವಿರುದ್ಧ 17 ಶಾಸಕರು ಅವಿಶ್ವಾಸ ತೋರಿದ್ದರು. ನಂತರ ಅಕ್ರಮ ಗಣಿ ಹಗರಣ ಹಾಗೂ ಡಿನೋಟಿಫಿಕೇಷನ್ ಚಕ್ರವ್ಯೂಹಕ್ಕೆ ಸಿಲುಕಿದ ಯಡಿಯೂರಪ್ಪ ಕೇವಲ 38 ತಿಂಗಳು ಅಧಿಕಾರ ನಡೆಸಿ 2012 ನವೆಂಬರ್​ನಲ್ಲಿ ಜೈಲು ಪಾಲಾಗಿದ್ದರು.

2007ರಲ್ಲಿ ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಖ್ಯಾತಿಯನ್ನು ಸಂಪಾದಿಸಿದ್ದ ಇದೇ ಯಡಿಯೂರಪ್ಪ 2012ರ ವೇಳೆಗೆ ಅಧಿಕಾರದಲ್ಲಿದ್ದಾಗಲೇ ಜೈಲು ಪಾಲಾದ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದು ಮಾತ್ರ ದುರುಂತ.

ಜೈಲಿನಿಂದ ಬಿಡುಗಡೆಯಾಗಿದ್ದ ಯಡಿಯೂರಪ್ಪ ಬಿಜೆಪಿ ತ್ಯಜಿಸಿ 2012 ಡಿಸೆಂಬರ್ 9 ರಂದು ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಎಂಬ ಸ್ವಂತ ಪಕ್ಷ ಕಟ್ಟಿದ್ದರು. ಅಲ್ಲದೆ 2013ರಲ್ಲಿ ಸ್ವಂತ ಬಲದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಕೈಸುಟ್ಟುಕೊಂಡು ನಂತರ ಮತ್ತೆ ಬಿಜೆಪಿಯ ಜೊತೆಗೆ ತಮ್ಮ ಪಕ್ಷವನ್ನು ವಿಲೀನ ಮಾಡಿಕೊಂಡರು. ಹೀಗೆ ಪಕ್ಷದಿಂದ ಹೊರ ಹೋಗಿ 2013ರ ಚುನಾವಣೆಯಲ್ಲಿ ದೊಡ್ಡ ಹೊಡೆತ ಕೊಟ್ಟು ಮತ್ತೆ ಪಕ್ಷಕ್ಕೆ ಹಿಂತಿರುಗಿದರೂ ಬಿಜೆಪಿಯಲ್ಲಿನ ಅವರ ಹವಾ ಮಾತ್ರ ಇನ್ನೂ ಕಡಿಮೆಯಾಗಿರಲಿಲ್ಲ.

ಯಡಿಯೂರಪ್ಪ ಪಕ್ಷ ತ್ಯಜಿಸಿದ ಪರಿಣಾಮ 2013ರ ಚುನಾವಣೆಯಲ್ಲಿ 110ರಿಂದ 40 ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ ಮತ್ತೆ ಯಡಿಯೂರಪ್ಪನವರ ದೆಸೆಯಿಂದ 2018ರ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಇಂದು ಇತಿಹಾಸ.

2018ರ ಚುನಾವಣೆಯಲ್ಲಿ ಬಿಜೆಪಿ ಏಕಮಾತ್ರ ದೊಡ್ಡ ಪಕ್ಷವಾದ ಕಾರಣ ರಾಜ್ಯಪಾಲ ವಜುಭಾಯ್ ವಾಲಾ ಯಡಿಯೂರಪ್ಪನವರನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದರು. ಸರ್ಕಾರ ರಚಿಸಿ 3ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೂ ಸಹ ಯಡಿಯೂರಪ್ಪನವರಿಗೆ ಬಹುಮತ ಸಾಬೀತುಪಡಿಸುವುದು ಸಾಧ್ಯವಾಗಿರಲಿಲ್ಲ. ಇದೀಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ದು, ಮತ್ತೆ ಸರ್ಕಾರ ರಚಿಸುವ ಸುವರ್ಣಾವಕಾಶ ಬಿಜೆಪಿಗೆ ಲಭ್ಯವಾಗಿದೆ. ಜುಲೈ 26 ಶುಕ್ರವಾರ ನಾಲ್ಕನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಹಿಂದೆ ಮೂರು ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ ಮೂರು ಬಾರಿಯೂ ಪೂರ್ಣಾವಧಿ ಪೂರೈಸದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೇ ಕಾರಣಕ್ಕೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಅವರನ್ನು ದುರಂತ ನಾಯಕ ಎಂದೇ ಕರೆಯಲಾಗುತ್ತದೆ. ಇದೀಗ ಮತ್ತೆ ನಾಲ್ಕನೇ ಬಾರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಬಾರಿಯಾದರೂ ಅವರು ಉಳಿದ ನಾಲ್ಕು ವರ್ಷ ಸಿಎಂ ಆಗಿಯೇ ಮುಂದುವರಿಯುತ್ತಾರ? ಅಥವಾ ಅವರ ದುರಂತ ಇತಿಹಾಸ ಮತ್ತೆ ಅವರ ಬೆನ್ನನ್ನು ಹಿಂಬಾಲಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಆದರೆ, 1970ರಿಂದ 2019ರ ವರೆಗೆ ಕ್ರಮಿಸಿದ ಅವರ ರಾಜಿಕೀಯ ಇತಿಹಾಸ ಮಾತ್ರ ಯಾವ ರೋಚಕ ಸಿನಿಮಾಗೂ ಕಮ್ಮಿಯಿಲ್ಲದ ಅತಿರಂಜಕ ಪ್ರಯಾಣ ಎಂದರೆ ತಪ್ಪಾಗಲಾರದು.

Comments are closed.