ಕರ್ನಾಟಕ

ಸೋಮವಾರದಂದು ಬಹುಮತ ಸಾಬೀತು ಪಡಿಸುತ್ತೇನೆ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌. ಯಡಿಯೂರಪ್ಪ ಸೋಮವಾರವೇ ಬಹುಮತ ಸಾಬೀತುಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಿದರು. ಸಭೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದರು.

ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಜನತೆ, ಪ್ರತಿಪಕ್ಷಗಳಿಗಗೆ ಭರವಸೆ ಕೊಡುತ್ತೇನೆ. ಫರ್‌ಗೆಟ್‌ ಅಂಡ್‌ ಫರ್‌ಗೀವ್‌ ಎಂಬ ಧೋರಣೆ ಹೊಂದಿದ್ದೇನೆ ಎಂದರು.

ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಎರಡು ಕಂತುಗಳಲ್ಲಿ 4 ಸಾವಿರ ರೂ. ಕೊಡಲು ತೀರ್ಮಾನಿಸಲಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ರಾಜ್ಯದಿಂದಲೂ ನೆರವು ನೀಡಲಾಗುವುದು. ಅಲ್ಲದೇ ನೇಕಾರರ ನೂರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಘೋಷಿಸಿದರು.

ಕೇಂದ್ರ ಈಗಾಗಲೇ 6 ಸಾವಿರ ರೂ. ನೀಡಲು ನಿರ್ಧರಿಸಿದೆ. ಈಗ ರಾಜ್ಯ ಸರಕಾರ 4 ಸಾವಿರ ರೂ. ನೀಡುವುದರಿಂದ ರಾಜ್ಯದ ರೈತರಿಗೆ 10 ಸಾವಿರ ರೂ. ಸಿಗಲಿದೆ.

ರೈತರ ಸಾಲ ಮನ್ನಾ ಬಗ್ಗೆ ಮಾಹಿತಿ ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ 14 ತಿಂಗಳಲ್ಲಿ ಆಗದ ಕಾರ್ಯವನ್ನು ಮುಂದಿನ 4-5 ತಿಂಗಳಲ್ಲಿ ಮಾಡಿ ತೋರಿಸುವೆ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಅದನ್ನು ಕೂಡಲೇ ಸರಿಪಡಿಸುವುದೇ ನನ್ನ ಮುಂದಿರುವ ಆದ್ಯತೆ ಎಂದು ಯಡಿಯೂರಪ್ಪ ತಿಳಿಸಿದರು.

ಜು.29 ಕ್ಕೆ ಬಹುಮತ ಸಾಬೀತುಪಡಿಸಲಾಗುವುದು. ಅದೇ ದಿನದಂದು ಹಣಕಾಸು ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗುವುದು ಎಂದು ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

Comments are closed.