
ಬೆಂಗಳೂರು(ಜುಲೈ 19): ವಿಶ್ವಾಸಮತ ಗೊತ್ತುವಳಿ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶ್ರೀಮಂತ ಪಾಟೀಲ್ ನಾಪತ್ತೆ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಶ್ರೀಮಂತ ಪಾಟೀಲ್ ಅವರು ನಮ್ಮೊಂದಿಗೆ ಬಜ್ಜಿ ಚಹಾ ತಿಂದು ಖುಷಿಯಿಂದಲೇ ಇದ್ದವರು 15 ನಿಮಿಷದಲ್ಲೇ ನಾಪತ್ತೆಯಾಗಿಬಿಟ್ಟರು ಎಂದು ಆ ಪ್ರಸಂಗವನ್ನು ನೆನಪಿಸಿಕೊಂಡರು.
“ರೆಸಾರ್ಟ್ನಲ್ಲಿ ಶ್ರೀಮಂತ ಪಾಟೀಲ್ ಅವರು ನಮ್ಮ ಕೂಡೇ ಇದ್ದರು. ಆಗ ನಾನು ಏನಣ್ಣ ವಿಷಯ ಎಂದು ಕೇಳಿದೆ. ಅದಕ್ಕೆ ಅವರು ನನ್ನದೊಂದು ಕೆಲಸ ಆಗಬೇಕು ಅಂದ್ರು. ನಾನು ನಮ್ಮ ಸಿಎಲ್ಪಿ ನಾಯಕ ಸಿದ್ರಾಮಣ್ಣಗೆ ಇದನ್ನು ತಿಳಿಸಿದೆ. ಅವರು ಕುಮಾರಸ್ವಾಮಿ ಅವರಿಗೆ ಫೋನ್ ಮಾಡಿ ಶ್ರೀಮಂತ ಪಾಟೀಲ್ ಅವರ ಕೆಲಸ ಆಗಬೇಕಿದೆ ಎಂದು ಕೇಳಿದರು. ಆಗ ಕುಮಾರಸ್ವಾಮಿ ಮತ್ತೆ ಫೋನ್ ಮಾಡ್ತೀನಿ ಅಂದ್ರು. ಒಂದೈದು ನಿಮಿಷದ ನಂತರ ಮುಖ್ಯಮಂತ್ರಿ ಅವರು ಫೋನ್ ಮಾಡಿ ಶ್ರೀಮಂತ ಪಾಟೀಲ್ ಅವರ ಕೆಲಸ ಆಗುತ್ತೆ ಅಂದ್ರು. ಶ್ರೀಮಂತ ಪಾಟೀಲರು ನಮ್ಮ ಜೊತೆ ಕೂತು ಬಜ್ಜಿ, ಚಹಾ ಕುಡಿದರು. ಅದಾಗಿ 15 ನಿಮಿಷದಲ್ಲಿ ಶ್ರೀಮಂತ ಪಾಟೀಲರು ನಾಪತ್ತೆಯಾಗಿದ್ದರು. ಅವರಿಗೆ ಎದೆನೋವು ಬಂದಿದಂತೆ…” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರಾಜೀನಾಮೆ ಕೊಟ್ಟಿರುವ ಮೈತ್ರಿಪಕ್ಷಗಳ ಶಾಸಕರು ವಾಪಸ್ ಬರಬೇಕೆಂದು ಈ ವೇಳೆ ಬೆಳಗಾವಿ ಶಾಸಕಿ ಮನವಿ ಮಾಡಿದರು. “ಈಗ ಹೋದವರಿಗೆ ಆ ದೇವರು ಒಳ್ಳೆಯ ಬುದ್ಧಿ ಕೊಡಲಿ. ಎಲ್ಲರೂ ಒಟ್ಟಿಗೆ ವಾಪಸ್ ಬರಲಿ. ತಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಮೈತ್ರಿ ಸರ್ಕಾರವನ್ನು ಬಲಗೊಳಿಸಲಿ” ಎಂದವರು ಕರೆ ನೀಡಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಏನು ಕೇಳಿದರೂ ಯಾವುದಕ್ಕೂ ಇಲ್ಲ ಎನ್ನದೆ ಕೆಲಸ ಮಾಡಿಕೊಡುತ್ತಾರೆ. ಸಿದ್ದರಾಮಯ್ಯ ಅವರು ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಾರೆ. ಈ ಸರ್ಕಾರ ಮುಂದುವರಿಯಬೇಕು ಎಂದು ಕಾಂಗ್ರೆಸ್ ಶಾಸಕಿ ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕುಟುಕಿದರು. “ವಿರೋಧ ಪಕ್ಷಗಳೇ ಇರಬಾರದು ಎಂದು ಇವರು ಪ್ರಯತ್ನಿಸುತ್ತಿದ್ದಾರೆ. ಮಾನ್ಯ ಪ್ರಧಾನ ಮಂತ್ರಿಗಳು ಪಶ್ಚಿಮ ಬಂಗಾಳದಲ್ಲಿ ಮಾತನಾಡುವಾಗ, 34 ಟಿಎಂಸಿ ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಮಮತಾ ಬ್ಯಾನರ್ಜಿ ಅವರನ್ನುದ್ದೇಶಿಸಿ ಹೇಳುತ್ತಾರೆ. ಈ ಮಟ್ಟಿಗೆ ಬಂದಿದೆ ಅವರ ರಾಜಕಾರಣ” ಎಂದು ಶಾಸಕಿ ಬೇಸರಿಸಿದರು.
ಇನ್ನು, ಯಡಿಯೂರಪ್ಪ ಬಗ್ಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, “ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದ್ದು ಕಾಂಗ್ರೆಸ್ ಪಕ್ಷವಲ್ಲ. ನಿಮ್ಮ ಪಕ್ಷದವರೇ ನಿಮಗೆ ತೊಂದರೆ ಕೊಟ್ಟರು” ಎಂದು ತಿಳಿಸಿದರು.
ಹಾಗೆಯೇ, ತಾನು 20 ವರ್ಷ ಕಷ್ಟಪಟ್ಟು ಶಾಸಕ ಸ್ಥಾನ ಪಡೆದದ್ದು ಇಂಥದ್ದನ್ನೆಲ್ಲಾ ನೋಡುವುದಕ್ಕಾ ಎಂದು ನೋವು ಪಟ್ಟ ಅವರು, ಇವತ್ತು ಶಾಸಕರಿಗೆ ಜಿಲ್ಲಾಪಂಚಾಯತ್ ಸದಸ್ಯರಿಗಿರುವಷ್ಟೂ ಗೌರವವೂ ಇಲ್ಲ ಎಂದು ವಿಷಾದಿಸಿದರು.
Comments are closed.