
ಬೆಂಗಳೂರು: ವಿಧಾನಸಭೆಯಲ್ಲಿಂದು ಮಾತನಾಡಿದ ಸಚಿವ ಸಾ.ರಾ.ಮಹೇಶ್, ಹೆಚ್.ವಿಶ್ವನಾಥ್ ವಿರುದ್ಧ ಬಹಿರಂಗ ಆರೋಪ ಮಾಡಿದ್ದಾರೆ.
ವಿಶ್ವನಾಥ್ ಅವರು ಬೇಸರದಲ್ಲಿದ್ದಾಗ ನಾನು ಅವರನ್ನು ನಮ್ಮ ತೋಟದ ಮನೆಗೆ ಕರೆಸಿಕೊಂಡು ಕೇಳಿದ್ದೆ. ಆವಾಗ ಅವರು, ನಾನು ತುಂಬಾ ಕಷ್ಟದಲ್ಲಿದ್ದೇನೆ. ಚುನಾವಣೆಗೆ ಸಾಕಷ್ಟು ಸಾಲಮಾಡಿಕೊಂಡಿದ್ದೇನೆ. ಸಚಿವನಾಗಬೇಕೆಂಬ ಆಸೆಯಿತ್ತು ಎಂದು ಹೇಳಿದ್ದರು. ಸಚಿವನಾಗೋಕೆ ನಮ್ಮ ರೇವಣ್ಣ ಬಿಡಲಿಲ್ಲ ಎಂದು ವಿಶ್ವನಾಥ್ ಹೇಳಿದ್ದರೆಂದು ಸಾ.ರಾ.ಮಹೇಶ್ ಆರೋಪಿಸಿದ್ದಾರೆ.
ಅಲ್ಲದೇ, ಒಬ್ಬ ಪತ್ರಕರ್ತರಿಂದ ವಿಶ್ವನಾಥ್ ರಿಸೈನ್ ಮಾಡಿದ್ದಾರೆ. ಆ ಪತ್ರಕರ್ತ, ಅರ್ಧ ಪತ್ರಕರ್ತ, ಅರ್ಧ ರಾಜಕಾರಣಿ. ಆ ಪತ್ರಕರ್ತನಿಂದಾಗಿಯೇ ವಿಶ್ವನಾಥ್ ಹೋಗಿದ್ದು, ಆ ಪತ್ರಕರ್ತ ಜಿ.ಟಿ.ದೇವೇಗೌಡರಿಗೂ ಹತ್ತಿರದವರು ಎಂದು ಹೇಳಿದ್ದಾರೆ. ನಾನು ಮನೆಗೆ ಕರೆಸಿ ಮಾತನಾಡಿದಾಗ, ನನಗೆ ಈ ಪತ್ರಕರ್ತನ ಮುಖೇಣ 28 ಕೋಟಿ ರೂಪಾಯಿ ಕೊಡ್ತೀನಿ ಎಂದು ಹೇಳಿದ್ದಾರೆ. ಆದರೆ ದೇವೇಗೌಡರು ಕಷ್ಟಕಾಲದಲ್ಲಿ ನನ್ನ ಕೈಹಿಡಿದಿದ್ದಾರೆ. ನಾನು ಅವರಿಗೆ ಮೋಸ ಮಾಡುವುದಿಲ್ಲ ಎಂದು ಹೇಳಿದ್ದರು.
ಇಷ್ಟೇ ಅಲ್ಲದೇ, ನಾನು ಪಕ್ಷ ಬಿಟ್ಟು ಹೋಗಲ್ಲ. ನನ್ನ ಸಾಲ ತೀರಿಸಿಕೊಳ್ಳಲು ವ್ಯವಸ್ಥೆ ಮಾಡು ಎಂದು ಹೇಳಿದ್ದರು ಎಂದು ವಿಶ್ವನಾಥ್ ವಿರುದ್ಧ ಸಾರಾ ಮಹೇಶ್ ಆರೋಪ ಮಾಡಿದ್ದಾರೆ. ಮುಂಬೈಗೆ ಹೋಗಲು ವಿಶ್ವನಾಥ್ಗೆ ವಿಮಾನ ಕೊಟ್ಟವರು ಯಾರು..? ವಿಶ್ವನಾಥ್ ಅವರನ್ನೇ ಕರೆಸಿ ಅವರೇ ಹೇಳಲಿ ಎಂದು ಸಚಿವ ಸಾ.ರಾ.ಮಹೇಶ್ ಒತ್ತಾಯಿಸಿದ್ದಾರೆ.
ನಾನು ಹೇಳಿದ್ದು ಸುಳ್ಳಾದರೆ ಇನ್ಯಾವತ್ತು ನಾನು ಸಾರ್ವಜನಿಕ ಜೀವನದಲ್ಲಿ ಬಿಳಿಬಟ್ಟೆ ಹಾಕಲ್ಲ, ಕೈಮುಗಿದು ಮತ ಕೇಳುವುದಿಲ್ಲ., ಯಾವ ಚುನಾವಣೆಗೂ ನಿಲ್ಲಲ್ಲ ಎಂದು ಹೇಳಿದ್ದಾರೆ.
Comments are closed.