ಕರ್ನಾಟಕ

ಸರ್ಕಾರ ರಚನೆಗೂ ಮುನ್ನವೇ ಬಿಜೆಪಿಯಲ್ಲಿ ಶುರುವಾದ ಮಂತ್ರಿಗಿರಿ ಲೆಕ್ಕಾಚಾರ

Pinterest LinkedIn Tumblr


ಬೆಂಗಳೂರು: ಇಂದು ಮೈತ್ರಿ ಸರ್ಕಾರದ ಪಾಲಿಗೆ ಕಡೆಯ ದಿನವಾಗುವ ಲಕ್ಷಣಗಳು ದಟ್ಟವಾಗಿ ಗೋಚರವಾಗುತ್ತಿವೆ. ಮೈತ್ರಿ ನಾಯಕರು ಎಷ್ಟೇ ಸರ್ಕಸ್ ಮಾಡಿದರೂ ಅತೃಪ್ತರ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಸುಪ್ರೀಂಕೋರ್ಟ್​ನಲ್ಲೂ ತೀರ್ಪು ತಮ್ಮ ಪರವಾಗಿ ಬಂದಿಲ್ಲ. ಹೀಗಾಗಿ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿ ಉಭಯ ಪಕ್ಷಗಳ ನಾಯಕರು ಇದ್ದರೆ, ಇತ್ತ ಬಿಜೆಪಿ ಪಾಳಯದಲ್ಲಿ ಆಗಲೇ ಮಂತ್ರಿಗಿರಿ ಲೆಕ್ಕಾಚಾರ ಆರಂಭವಾಗಿದೆ.

ದೇವನಹಳ್ಳಿಯ ರಮಡ ರೆಸಾರ್ಟ್​ನಲ್ಲಿ ಬೀಡುಬಿಟ್ಟಿರುವ ಬಿಜೆಪಿ ಶಾಸಕರು ಸರ್ಕಾರ ರಚಿಸಿಯಾಗಿದೆ ಎಂದೇ ಭಾವಿಸಿ, ಸಡಗರದಿಂದ ಇದ್ದಾರೆ. ಈ ನಡುವೆ ಯಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರಗಳು ರೆಸಾರ್ಟ್​ನಲ್ಲಿ ಜೋರಾಗಿ ನಡೆದಿದ್ದು, ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಉಪಮುಖ್ಯಮಂತ್ರಿ ಹುದ್ದೆ ಮೇಲೆ ನಾಲ್ವರು ಶಾಸಕರು ಕಣ್ಣಿಟ್ಟಿದ್ದಾರೆ ಎಂಬ ಗುಸುಗುಸು ಚರ್ಚೆ ರೆಸಾರ್ಟ್​ನಲ್ಲಿ ನಡೆಯುತ್ತಿದೆ. ಆರ್ ಅಶೋಕ್, ಅರವಿಂದ ಲಿಂಬಾವಳಿ, ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ಉಪಮುಖ್ಯಮಂತ್ರಿ ಆಗುತ್ತೇನೆ ಎಂದೇ ಶ್ರೀರಾಮುಲು ಬಿಂಬಿಸಿಕೊಂಡಿದ್ದರು. ಆದರೆ, ಅವರ ಜೊತೆಗೆ ಈ ಹುದ್ದೆಗೆ ಅರವಿಂದ ಲಿಂಬಾವಳಿ, ಆರ್ ಅಶೋಕ್ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಹೆಸರು ಕೂಡ ಕೇಳಿಬರುತ್ತಿವೆ. ಅರವಿಂದ ಲಿಂಬಾವಳಿ ಕೂಡ ಡಿಸಿಎಂ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ ಎಂದು ಮೂವರು ಲಿಂಬಾವಳಿ ಮೇಲೆ ಕೆಂಡ ಕಾರುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಅರವಿಂದ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಆದರೆ, ಲಿಂಬಾವಳಿ ಇದನ್ನು ಬಿಟ್ಟು ಡಿಸಿಎಂ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಕೆ.ಎಸ್ ಈಶ್ವರಪ್ಪ ಅಥವಾ ಆರ್ ಅಶೋಕ್​ಗೆ ಕಟ್ಟಲು ಪ್ಲಾನ್​ ನಡೀತ್ತಿದೆಯಂತೆ ಎಂಬ ಚರ್ಚೆಗಳು ಶಾಸಕರ ನಡುವೆ ನಡೆದಿವೆ.

ಸಚಿವ ಸ್ಥಾನದ ರೇಸ್​ನಲ್ಲಿ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಜೆ.ಸಿ ಮಾಧುಸ್ವಾಮಿ, ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಸುನೀಲ್‌ ಕುಮಾರ್ ಕಾರ್ಕಳ, ರಾಮದಾಸ್ ,ರವೀಂದ್ರನಾಥ್, ಉಮೇಶ್ ಕತ್ತಿ, ಚಿತ್ರದುರ್ಗ ತಿಪ್ಪಾರೆಡ್ಡಿ, ಪ್ರೀತಂ‌ಗೌಡ, ಕೆ.ಜೆ ಬೋಪಯ್ಯ, ಸುಳ್ಯ ಶಾಸಕ ಅಂಗಾರ, ಸಿ.ಟಿ ರವಿ, ಶಶಿಕಲಾ ಜೊಲ್ಲೆ ಇದ್ದಾರೆ ಎನ್ನುವ ಚರ್ಚೆಗಳು ನಡೆದಿವೆ. ಇನ್ನು ತನಗೂ ಸಚಿವ ಸ್ಥಾನ ನೀಡಲೇಬೇಕು ಎಂದು ಬಸವರಾಜ ಪಾಟೀಲ್ ಯತ್ನಾಳ್ ಕೂಡ ಪ್ರಯತ್ನ ಮಾಡುತ್ತಿದ್ದಾರಂತೆ.

ರೆಸಾರ್ಟ್​ನಲ್ಲಿ‌ ಡಿಸಿಎಂ ಹುದ್ದೆ ಚರ್ಚೆಯಾಗುತ್ತಿರುವ ವಿಷಯ ತಿಳಿದ ಬಿ.ಎಸ್.ಯಡಿಯೂರಪ್ಪ ಕೆಂಡಮಂಡಲರಾಗಿ, ಯಾರೂ ಕೂಡ ಯಾವುದೇ ಹುದ್ದೆ ಬಗ್ಗೆ ಚರ್ಚೆ ನಡೆಸಬಾರದು. ಯಾರಿಗೆ ಏನು, ಯಾರು ಏನಾಗ್ತಾರೆ, ಯಾರಿಗೆ ಯಾವ ಖಾತೆ, ಯಾರು ಸಚಿವರಾಗ್ತಾರೆ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸೋದು. ಸರ್ಕಾರ ರಚನೆಗೂ ಮೊದಲು, ನಂತರ ಯಾರೂ ಚರ್ಚೆ ಮಾಡಬಾರದು. ಅಲ್ಲಿಯವರೆಗೂ ಮೌನವಾಗಿ ಇರುವಂತೆ ನಾಯಕರಿಗೆ ಬಿಎಸ್​ವೈ ಖಡಕ್ ಸೂಚನೆ ನೀಡಿದ್ದಾರಂತೆ.

Comments are closed.