
ಬೆಂಗಳೂರು(ಜುಲೈ.16): ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು, ಇದೇ ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ನ ಶಾಸಕರಿಗೆ, ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಲಾಗಿದೆ. ಪ್ರಮುಖವಾಗಿ ಶಾಸಕರ ಭವನದಲ್ಲಿರುವ ಅತೃಪ್ತ ಶಾಸಕರ ಕೊಠಡಿಗಳ ಬಾಗಿಲುಗಳಿಗೆ ವಿಪ್ ಪ್ರತಿಗಳನ್ನು ಅಂಟಿಸಲಾಗಿದೆ.
ಇತ್ತೀಚೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾರೆ. ಆದರೆ, ಇಲ್ಲಿಯವರೆಗೂ ಸ್ಪೀಕರ್ ರಮೇಶ್ ಕುಮಾರ್ ಅವರು ಮಾತ್ರ ಅತೃಪ್ತರ ರಾಜೀನಾಮೆ ಅಂಗೀಕರಿಸಿಲ್ಲ. ಅಲ್ಲದೇ ವಿಶ್ವಾಸಮತ ಯಾಚನೆ ವೇಳೆ ವಿಧಾನಸಭೆಗೆ ಅತೃಪ್ತರು ಗೈರಾಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿತ್ತು.
ವಿಧಾನಸಭೆ ಕಲಾಪ ಗುರುವಾರ ನಡೆಯಲಿದೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಂದೇ ವಿಶ್ವಾಸಮತ ಯಾಚಿಸಲಿದೆ. ಇದರೊಂದಿಗೆ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.
ಸರಕಾರ ಬಹುಮತ ಕಳೆದುಕೊಂಡಿದೆ ಎಂಬ ಕಾರಣ ನೀಡಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ಪ್ರತಿಪಕ್ಷದವರು ಕೋರಿದ್ದರು. ನಿಯಮಾವಳಿ ಪ್ರಕಾರ ನಾನು ಕ್ರಮಕೈಗೊಂಡಿದ್ದೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಈ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚಿಸಲು ಸ್ಪೀಕರ್ ಸೂಚಿಸಿದ್ದಾರೆ. ಗುರುವಾರದವರೆಗೂ ಬೆಳವಣಿಗೆಯನ್ನು ಕಾದು ನೋಡುತ್ತೇವೆ ಎಂದು ಬಿ.ಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಈ ಮಧ್ಯೆ ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅತೃಪ್ತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯವೂ, ಎರಡು ಕಡೆಯ ವಕೀಲರ ವಾದ-ಪ್ರತಿವಾದ ಆಲಿಸಿದೆ. ಅಲ್ಲದೇ ತೀರ್ಪು ನಾಳೆ ನೀಡುವುದಾಗಿ ತಿಳಿಸಿದೆ. ಇನ್ನು ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರೆ, ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ಹಾಗೂ ಸಿಎಂ ಪರವಾಗಿ ರಾಜೀವ್ ಧವನ್ ಪ್ರತಿವಾದ ಮಂಡಿಸಿದರು.
Comments are closed.