ಕರ್ನಾಟಕ

2ನೇ ಚಂದ್ರಯಾನದ ಜವಾಬ್ದಾರಿ ಹೊತ್ತ ಇಸ್ರೋ ಮಹಿಳಾ ವಿಜ್ಞಾನಿಗಳು!

Pinterest LinkedIn Tumblr


ಬೆಂಗಳೂರು(ಜುಲೈ.14): ಭಾರತದ ಎರಡನೇ ಚಂದ್ರಯಾನಕ್ಕೆ ಇಸ್ರೋ ಮಹಿಳಾ ವಿಜ್ಞಾನಿಗಳು ಅಣಿಯಾಗಿದ್ದಾರೆ. ನಾಳೆ ಸೋಮವಾರ ಬೆಳಗಿನ ಜಾವ 2.51ಕ್ಕೆ ಆಂಧ್ರದ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದ ಮೂಲಕ ಚಂದ್ರಯಾನ-2 ಉಡಾವಣೆ ಆಗಲಿದೆ. ದೇಶಾದ್ಯಂತ ಭಾರೀ ಕುತೂಹಲ ಮೂಡಿಸಿರುವ ಯೋಜನೆ ಇದಾಗಿದ್ದು, ಇಡೀ ಪ್ರಪಂಚವೇ ವೀಕ್ಷಣೆಗಾಗಿ ಕಾದು ಕುಳಿತಿದೆ.

ಚಂದ್ರಯಾನ-2 ನೇತೃತ್ವ ಮಹಿಳೆಯರದ್ದು!

ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಅಂಗಳದ ಕೌತುಕ ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಸಜ್ಜಾಗಿದೆ. ಈ ಚಂದ್ರಯಾನ ನೌಕೆ ಹೊತ್ತು ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್‌, ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯ ನೇತೃತ್ವವನ್ನು ಈ ಬಾರಿ ಇಬ್ಬರು ಮಹಿಳೆಯರು ವಹಿಸಿಕೊಂಡಿದ್ದಾರೆ ಎಂಬುದು ಭಾರೀ ವಿಶೇಷ.

ಕರಿಧಾಲ್ ಮತ್ತು ಎಂ.ವನಿತಾ ಎಂಬ ಮಹಿಳಾ ವಿಜ್ಞಾನಿಗಳು ಚಂದ್ರಯಾನ-2 ಯೋಜನೆ ಸಿದ್ಧಪಡಿಸಿದ್ದಾರೆ. ಈ ಹಿಂದಿನ ಮಂಗಳಯಾನದಲ್ಲಿ ಮಹತ್ವದ ಪಾತ್ರವಹಿಸಿದ್ದ ಇವರು, ಈ ಬಾರಿ ಚಂದ್ರಯಾನ-2 ಯೋಜನೆ ರೂವಾರಿಗಳಾಗಿದ್ದಾರೆ. ಅಂತೆಯೇ ಟಿ.ಕೆ. ಅನುರಾಧ, ಎನ್. ವಲಾರ್ಮತಿ, ವಿ.ಆರ್ ಲಲಿತಾಂಬಿಕ, ಸೀತಾ ಸೋಮ ಸುಂದರಂ, ನಂದಿನಿ ಹರಿನಾಥ್, ಮಿನಲ್ ರೋಹಿತ್ ಸೇರಿದಂತೆ ಹಲವರು ಈ ಯೋಜನೆಗಾಗಿ ಶ್ರಮಿಸಿದ್ದಾರೆ.

ಸತತ 11 ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿ ನೌಕೆಯನ್ನು ಸುತ್ತಿಸಿದ್ದ ಇಸ್ರೋ ಕೊನೆಗೂ ಸಂಶೋಧನೆಗೆ ಮುಂದಾಗಿದೆ. ಹಾಗಾಗಿಯೇ ಇದೇ ಮೊದಲ ಬಾರಿ ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಚಂದಿರನ ಅಂಗಳದಲ್ಲಿ ಇಳಿಸಲು ನಿರ್ಧರಿಸಿದೆ. ಈ ಸಾಹಸವನ್ನು ಇಡೀ ಜಾಗತಿಕ ವೈಜ್ಞಾನಿಕ ಸಮುದಾಯವೇ ಕುತೂಹಲದಿಂದ ಎದುರು ನೋಡುತ್ತಿದೆ. ಒಂದು ವೇಳೆ ಈ ಯಾನದಲ್ಲಿ ನಾವು ಯಶಸ್ವಿಯಾದರೆ, ಚಂದ್ರನ ಅಂಗಳದಲ್ಲಿ ನೌಕೆ ಇಳಿಸಿದ ವಿಶ್ವದ 4ನೇ ದೇಶ ಎಂಬ ಹಿರಿಮೆ ಭಾರತದ್ದಾಗಲಿದೆ.

ಚಂದ್ರನ ಮೇಲೆ ಮೊದಲ ಬಾರಿಗೆ ಮಾನವ ಕಾಲಿಟ್ಟು ಜುಲೈ 20ಕ್ಕೆ 50 ವರ್ಷ. ಇದಕ್ಕೂ ಐದು ದಿನದ ಮುನ್ನವೇ ಜು.15ರಂದು ಇಸ್ರೋ ಚಂದ್ರನತ್ತ ಪ್ರಯಾಣ ಬೆಳೆಸುತ್ತಿರುವುದು ಗಮನಾರ್ಹ. ಈ ಯೋಜನೆಗೆ ಆಗುತ್ತಿರುವ ವೆಚ್ಚ 978 ಕೋಟಿ ರುಪಾಯಿ. ನಾಳೆ ಉಡಾವಣೆ ಆಗಲಿರುವ ಚಂದ್ರಯಾನ ನೌಕೆ, 3.84 ಲಕ್ಷ ಕಿ.ಮೀ.ಗಳಷ್ಟು ದೂರವನ್ನು ಸಾಗಿ ಸೆ.6ರಂದು ಚಂದ್ರನ ಅಂಗಳಕ್ಕೆ ಪದಾರ್ಪಣೆ ಮಾಡಲಿದೆ.

ಚಂದ್ರಯಾನ- 2 ನೌಕೆಯಲ್ಲಿ ವಿಕ್ರಮ್‌ ಎಂಬ ಲ್ಯಾಂಡರ್‌ ಇದೆ. 1.4 ಟನ್‌ ತೂಕದ ಲ್ಯಾಂಡರ್‌ 27 ಕೆ.ಜಿ. ತೂಕದ ಪ್ರಜ್ಞಾನ್‌ ಎಂಬ ರೋವರ್‌ ಅನ್ನು ಒಡಲಲ್ಲಿ ಒಯ್ಯಲಿದೆ. ಚಂದ್ರನ ಅಂಗಳದ ಮೇಲೆ ಇಳಿದ ಬಳಿಕ ಈ ಎರಡೂ ಉಪಕರಣಗಳು ಪ್ರತ್ಯೇಕಗೊಳ್ಳಲಿವೆ. ಸೌರಶಕ್ತಿ ಆಧರಿಸಿ ಒಂದು ಚಂದ್ರನ ದಿವಸ (ಭೂಮಿಯ 14 ದಿವಸಗಳಿಗೆ ಸಮ) ರೋವರ್‌ ಕೆಲಸ ಮಾಡಲಿದೆ. ಚಂದ್ರನ ಅಂಗಳದಲ್ಲಿ 500 ಮೀಟರ್‌ ಸುತ್ತಾಡಿ ಅಲ್ಲಿರಬಹುದಾದ ನೀರು, ಪಳೆಯುಳಿಕೆ ದಾಖಲೆಗಳಿಗಾಗಿ ಶೋಧ ನಡೆಸಲಿದೆ.

Comments are closed.