ಕರ್ನಾಟಕ

ಅತೃಪ್ತ ಶಾಸಕರು, ಸರ್ಕಾರಕ್ಕೆ ಸುಪ್ರೀಂ ಆದೇಶ ಕೊಂಚ ಸಿಹಿ, ಕೊಂಚ ಕಹಿ!

Pinterest LinkedIn Tumblr


ಬೆಂಗಳೂರು[ಜು.12]: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅನರ್ಹತೆ ಮತ್ತು ರಾಜೀನಾಮೆಯ ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶಿಸಿದೆ. ಈ ಆದೇಶ ದೋಸ್ತಿ ಸರ್ಕಾರ, ಸ್ಪೀಕರ್ ಹಾಗೂ ಅತೃಪ್ತ ಶಾಸಕರು ಎಲ್ಲರಿಗೂ ಕೊಂಚ ಸಿಹಿ, ಕೊಂಚ ಕಹಿ ನೀಡಿದೆ.

ವಾದ- ಪ್ರತಿ ವಾದವನ್ನು ಆಲಿಸಿದ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ತ್ರಿಸದಸ್ಯ ಪೀಠ ‘ಅನೇಕ ಸಾಂವಿಧಾನಿಕ ವಿಷಯಗಳನ್ನು ಈ ಪ್ರಕರಣದಲ್ಲಿ ತೀರ್ಮಾನಿಸಬೇಕಿದೆ. ಹೀಗಾಗಿ ಮುಂದಿನ ಆದೇಶದವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅನರ್ಹತೆ ಮತ್ತು ರಾಜೀನಾಮೆಯ ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದಿದೆ. ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ.

ಅತೃಪ್ತರ ದೂರಿನಲ್ಲಿ ಏನಿತ್ತು?:
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅಡಳಿತ ಸಂಪೂರ್ಣ ಕುಸಿದಿದೆ. ದುರಾಡಳಿತವೇ ಹೆಚ್ಚಾಗಿದ್ದು, ಐಎಂಎ ವಂಚನೆ, ಜೆಎಸ್‌ಡಬ್ಲ್ಯು ಭೂ ಹಗರಣದಂಥ ಹಲವು ಅಕ್ರಮಗಳು ಈ ಸರ್ಕಾರಾವಧಿಯಲ್ಲಿ ನಡೆದಿವೆ. ನಿರಂತರ ಆಂತರಿಕ ಸಂಘರ್ಷದಿಂದ ಸರ್ಕಾರ ಅಸ್ಥಿರವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದರೂ ಹೀನಾಯವಾಗಿ ಸೋಲಾಗಿದೆ.

ಈ ಎಲ್ಲ ಕಾರಣಗಳಿಂದ ಬೇಸತ್ತು ನಾವೆಲ್ಲ ಜು.6ರಂದು ರಾಜೀನಾಮೆ ನೀಡಲು ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಸ್ಪೀಕರ್‌ ಖಾಸಗಿ ಕಾರಿನಲ್ಲಿ ಕಚೇರಿಯಿಂದ ಹೊರ ಹೋಗಿದ್ದು ನಂತರ ಸಿಗಲೇ ಇಲ್ಲ. ಹೀಗಾಗಿ ವಿಧಾನಸಭೆ ಕಾರ್ಯದರ್ಶಿಗಳಿಗೆ ಮತ್ತು ರಾಜ್ಯಪಾಲರಿಗೆ ನಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದೇವೆ. ಬಳಿಕ ರಾಜ್ಯಪಾಲರು ಸ್ಪೀಕರ್‌ ಅವರಿಗೆ ನಮ್ಮ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದಾರೆ. ಇದೇ ವೇಳೆ ಇನ್ನಿಬ್ಬರು ಶಾಸಕರು ಮಂತ್ರಿ ಪದವಿಗೆ ತಮ್ಮ ರಾಜೀನಾಮೆ ಪತ್ರ ಹಾಗೂ ಬಿಜೆಪಿಗೆ ತಮ್ಮ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ನಾವು ಸ್ವ ಇಚ್ಛೆಯಿಂದ ಯಾವುದೇ ಭಯಕ್ಕೆ ಒಳಗಾಗದೇ ಸಂವಿಧಾನಬದ್ಧವಾಗಿ ರಾಜೀನಾಮೆ ನೀಡಿದ್ದೇವೆ.

ಜು.9ಕ್ಕೆ ಕಚೇರಿಗೆ ಆಗಮಿಸಿದ ಸ್ಪೀಕರ್‌ ಅವರು ಮಾಧ್ಯಮಗಳ ಮುಂದೆ ಬಂದು, ರಾಜೀನಾಮೆ ಸಲ್ಲಿಸಿದವರಲ್ಲಿ ಎಂಟು ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಹೇಳಿ 12ರಂದು ತಮ್ಮ ಮುಂದೆ ಖುದ್ದಾಗಿ ಹಾಜರಾಗುವಂತೆ 5 ಶಾಸಕರಿಗೆ ತಿಳಿಸಿದ್ದಾರೆ. ಇದು ದೂರುದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸ್ಪೀಕರ್‌ ಅವರ ಇಂಗಿತವನ್ನು ತೋರಿಸುತ್ತದೆ. ಈ ಮೂಲಕ ಅಲ್ಪಮತಕ್ಕೆ ಕುಸಿದಿರುವ ಸರ್ಕಾರವನ್ನು ಕಾಪಾಡುವ ಉದ್ದೇಶವಿದ್ದಂತಿತ್ತು.

ನಮ್ಮ ರಾಜೀನಾಮೆ ಪತ್ರ ನಿಗದಿತ ನಮೂನೆಯಲ್ಲಿಲ್ಲವೆಂಬ ಸ್ಪೀಕರ್‌ ಹೇಳಿಕೆ ಕರ್ನಾಟಕ ವಿಧಾನಸಭೆಯ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ನಮ್ಮ ರಾಜೀನಾಮೆ ಸಂವಿಧಾನದ ನಿಯಮಗಳಿಗೆ ಬದ್ಧವಾಗಿದೆ. ಸ್ಪೀಕರ್‌ ಆ ರೀತಿ ಹೇಳಿರುವುದು ರಾಜೀನಾಮೆ ಪ್ರಕ್ರಿಯೆ ವಿಳಂಬಗೊಳಿಸಿ, ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಮೇಲೆ ಒತ್ತಡ ಹೇರಲು ಅನುಕೂಲ ಮಾಡಿಕೊಡುವಂತಿದೆ. ನಮ್ಮ ರಾಜೀನಾಮೆಯನ್ನು ಸ್ವೀಕರಿಸದ ಸ್ಪೀಕರ್‌ ನಡೆ ಅತಾರ್ಕಿಕ, ಅಸಹಜ ಮತ್ತು ಸಂವಿಧಾನ ವಿರೋಧಿ. ಮುಖ್ಯಮಂತ್ರಿಗಳು ರಾಜೀನಾಮೆ ನೀಡಬಹುದೆಂಬ ಆತಂಕದಿಂದ ಸ್ಪೀಕರ್‌ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗಿತ್ತು.

ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಅತೃಪ್ತ ಶಾಸಕರ ಪಟ್ಟಿ

ಪ್ರತಾಪ್‌ಗೌಡ ಪಾಟೀಲ್, ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜು, ಬಿ.ಸಿ.ಪಾಟೀಲ್, ಶಿವಾನಂದ ಹೆಬ್ಬಾರ್‌, ಎಸ್‌.ಟಿ.ಸೋಮಶೇಖರ್‌, ಎಚ್‌.ವಿಶ್ವನಾಥ್‌, ಮಹೇಶ್‌ ಕುಮಟಳ್ಳಿ, ಕೆ.ಗೋಪಾಲಯ್ಯ, ನಾರಾಯಣ ಗೌಡ

Comments are closed.