
ಪ್ರೇಮಿಗಳ ಹಾಟ್ ಫೇವರೇಟ್ ಸ್ಪಾಟ್ ಆಗಿದ್ದ ಅದೊಂದು ಗಿರಿಧಾಮದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿ ಟಿ.ವಿ. ಕ್ಯಾಮೆರಾಗಳನ್ನ ಅಳವಡಿಸಿ ಪ್ರೇಮಿಗಳ ಸರಸ ಸಲ್ಲಾಪ, ಅಶ್ಲೀಲ ನಡುವಳಿಕೆಗಳಿಗೆ ಕಡಿವಾಣ ಹಾಕಿದ್ದೇ ತಡ, ಇರೋ ಫೇವರೇಟ್ ಸ್ಪಾಟ್ ಬಿಟ್ಟ ಪ್ರೇಮಿಗಳ ಪಯಣ ಮತ್ತೊಂದು ಬೆಟ್ಟದತ್ತ ನೆಟ್ಟಿದೆ.. ಇದ್ರಿಂದ ಅಲ್ಲಿರುವ ಪುರಾಣಪ್ರಸಿದ್ದ ದೇವರಿಗೆ ಪ್ರೇಮಿಗಳ ಉಪಟಳ ಹೆಚ್ಚಾಗಿದೆ..
ಬೆಂಗಳೂರಿನ ಪ್ರೇಮಿಗಳು ಸೇರಿದಂತೆ ಪಡ್ಡೆ ಹೈಕ್ಳುಗಳ ಮೋಜು ಮಸ್ತಿಗೆ ಹಾಟ್ ಫೇವರೇಟ್ ಸ್ಪಾಟ್ ಆಗಿದ್ದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ, ಹೆಜ್ಜೆ ಹೆಜ್ಜೆಗೂ ಸಿಸಿ. ಟಿ.ವಿ. ಕ್ಯಾಮೆರಾಗಳು ಸೆಕ್ಯೂರಿಟಿ ಗಾರ್ಡ್‌ಗಳು, ಪೊಲೀಸರ ಸರ್ಪಗಾವಲು ಹಾಕಿದ್ದೇ ತಡ, ಇದ್ರಿಂದ ಬೆದರಿದ ಪ್ರೇಮಿಗಳು, ನಂದಿಬೆಟ್ಟದ ಸಹವಾಸವೇ ಬೇಡ ಅಂತ ಮತ್ತೊಂದು ಸುಂದರವಾದ ಹಚ್ಚ ಹಸಿರಿನ ದಟ್ಟ ಕಾನನದ ಮಧ್ಯೆ ಇರುವ ಆವುಲ ಬೆಟ್ಟದತ್ತ ಮುಖ ಮಾಡಿದ್ದಾರೆ.. ಇದ್ರಿಂದ ಬೆಟ್ಟದಲ್ಲಿರುವ ಪುರಾಣ ಪ್ರಸಿದ್ದ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಪೂಜೆಗೆ ವಿಘ್ನ ಉಂಟಾಗಿದೆ..
ಆಹ್ಲಾದಕರ ಹಾಗೂ ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಆವುಲಬೆಟ್ಟದ ಪ್ರಕೃತಿ ಸೌಂದರ್ಯದಲ್ಲಿ, ಈಗ ಗುಯ್..ಗುಯ್.. ಬುರ್ರ್.. ಬುರ್ರ್.. ಬುರ್ರ್… ಅನ್ನೋ ಬೈಕ್ ಕಾರುಗಳ ಸದ್ದು ಹೆಚ್ಚಾಗಿದ್ದು, ಪ್ರೇಮಿಗಳ ಸರಸ ಸಲ್ಲಾಪದ ಜೊತೆ ಪಡ್ಡೆ ಹೈಕಳುಗಳ ಮೋಜು ಮಸ್ತಿ ಹೆಚ್ಚಾಗಿದೆ. ದಿನೇ ದಿನೇ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ, ಅರಣ್ಯ ಇಲಾಖೆಗೂ ಹಾಗೂ ದೇವಸ್ಥಾನಕ್ಕೂ ಇನ್ನಿಲ್ಲದ ಕಿರಿಕಿರಿಯಾದ್ರೆ, ಮತ್ತೊಂದೆಡೆ ಬೆಟ್ಟದಲ್ಲಿರುವ ಸೆಲ್ಫಿ ಬಂಡೆ ಬಳಿ ಹೋಗಿ ಸೆಲ್ಪೀ ಕ್ಲಿಕ್ ಮಾಡಿಕೊಳ್ಳೋ ಹುಚ್ಚು ಹೆಚ್ಚಾಗಿದೆ.. ನಿಷೇಧಿತ ಸೆಲ್ಫಿ ಬಂಡೆ ಸ್ಪಾಟ್‌ಗೆ ಬರುವವರನ್ನ ತಡೆಯಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ..
ಬೆಂಗಳೂರಿಗೆ ಕೇವಲ 60 ಕಿಲೋಮೀಟರ್ ದೂರದಲ್ಲಿರೋ ನಂದಿಗಿರಿಧಾಮದಲ್ಲಿ ಭದ್ರತೆ ಹೆಚ್ಚಾಗಿ, ಸರಸ ಸಲ್ಲಾಪಗಳಿಗೆ ಕಡಿವಾಣ ಬೀಳುತ್ತಿದ್ದಂತೆ, ಸುರಕ್ಷಿತವಲ್ಲದ ಸೂಕ್ತ ಭದ್ರತೆಯೂ ಇಲ್ಲದ ಆವುಲಬೆಟ್ಟದತ್ತ ಪ್ರೇಮಿಗಳ ಪಯಣ ಸಾಗಿರೋದು ಅರಣ್ಯ ಇಲಾಖೆ ಹಾಗೂ ದೇವಸ್ಥಾನಕ್ಕೆ ಇನ್ನಿಲ್ಲದೆ ಕಿರಿಕಿರಿಯಾಗಿದೆ.
Comments are closed.