
ಬೆಂಗಳೂರು (ಜುಲೈ.01); ಜಿಂದಾಲ್ ಕಂಪೆನಿಗೆ ಭೂ ಪರಭಾರೆ ಕುರಿತು ತಗಾದೆ ತೆಗೆದಿರುವ ವಿಜಯನಗರ ಶಾಸಕ ಅನಂದ್ ಸಿಂಗ್ ಹಾಗೂ ಆರಂಭದಿಂದಲೂ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇಂದು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ನಾಯಕರಿಗೆ ಶಾಕ್ ನೀಡಿದ್ದಾರೆ.
ಈಗಾಗಲೇ ಈ ಇಬ್ಬರೂ ನಾಯಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಈ ಕುರಿತು ಸಭಾಧ್ಯಕ್ಷರಾದ ಕೆ.ಆರ್. ರಮೇಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅಲ್ಲದೆ ಹಿರೆಕೆರೂರ್ ಶಾಸಕ ಬಿ.ಸಿ. ಪಾಟೀಲ್ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಇನ್ನೂ 6-7 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಇದರಿಂದ ಮೈತ್ರಿ ಸರ್ಕಾರಕ್ಕೆ ಶಾಸಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇದೇ ತಿಂಗಳು ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿ ಬಹುಮತ ಸಾಬೀತಿಗೆ ಆಗ್ರಹಿಸಿದರೆ ಮೈತ್ರಿ ಸರ್ಕಾರ ಬಹುತೇಕ ಬೀಳುವ ಸಾಧ್ಯತೆ ಇದೆ. ಆದರೆ, ಈ ಸರ್ಕಾರ ಬೀಳಬೇಕೋ? ಅಥವಾ ಉಳಿಯಬೇಕೋ? ಎಂಬ ನಿರ್ಧಾರ ಇದೀಗ ಸಭಾಧ್ಯಕ್ಷರಾದ ಕೆ.ಆರ್. ರಮೇಶ್ ಕುಮಾರ್ ಅವರ ಆ ಒಂದು ನಿರ್ಧಾರದಲ್ಲಿದೆ.
ಸಭಾಧ್ಯಕ್ಷರಾದ ರಮೇಶ್ ಕುಮಾರ್ ಕೈನಲ್ಲಿದೆ ಸರ್ಕಾರದ ಭವಿಷ್ಯ:
224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬೇಕಾಗಿರುವ ಮ್ಯಾಜಿಕ್ ನಂಬರ್ 113. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಶಾಸಕರ ಸಂಖ್ಯೆ 118. ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ರಾಜೀನಾಮೆಯಿಂದ ಸರ್ಕಾರದ ಸಂಖ್ಯೆ ಇದೀಗ 116ಕ್ಕೆ ಇಳಿಯಲಿದೆ.
ಹೀಗಾಗಿ ಈ ಇಬ್ಬರು ಶಾಸಕರ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ, ಇವರ ರಾಜೀನಾಮೆಯ ದೆಸೆಯಿಂದ ಮೈತ್ರಿ ಸರ್ಕಾರದ ಮತ್ತಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಕಂಟಕ ಎದುರಾಗುವುದು ಖಚಿತ. ಈ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಕೆ.ಆರ್. ರಮೇಶ್ ತೀರ್ಮಾನದ ಮೇಲೆ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ನಿಲ್ಲಲಿದೆ.
ಇದೀಗ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಸ್ಪೀಕರ್ ರಮೇಶ್ ಕುಮಾರ್ ಅಂಗಳದಲ್ಲಿದೆ. ಈ ಇಬ್ಬರೂ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವ, ಅಂಗೀಕರಿಸದಿರುವ, ವಿಳಂಬ ಮಾಡುವ ಅಥವಾ ಕಾಂಗ್ರೆಸ್ ಪಕ್ಷದ ದೂರಿನ ಅನ್ವಯ ಪಕ್ಷಾಂತರ ಕಾಯ್ದೆಯ ಅಡಿಯಲ್ಲಿ ಈ ಶಾಸಕರನ್ನು ಅಮಾನತಿನಲ್ಲಿಡುವ ಪರಮಾಧಿಕಾರ ಸ್ಪೀಕರ್ಗೆ ಇದೆ. ಈ ಅಧಿಕಾರನ್ನು ಪ್ರಶ್ನಿಸುವ ಹಕ್ಕು ರಾಜ್ಯಪಾಲ ಹಾಗೂ ನ್ಯಾಯಾಲಯಕ್ಕೂ ಸಹ ಇರುವುದಿಲ್ಲ ಉಲ್ಲೇಖಾರ್ಹ.
ಹೀಗಾಗಿ ರಾಜೀನಾಮೆ ಸಂಬಂಧ ರಾಜ್ಯಪಾಲರು ಮೊದಲು ಈ ಇಬ್ಬರೂ ನಾಯಕರನ್ನು ಕರೆದು ವಿವರಣೆ ಕೇಳಬಹುದು. ರಾಜೀನಾಮೆಗೆ ಇವರು ನೀಡುವ ಕಾರಣ ಸಮಂಜಸವಾಗಿದ್ದರೆ ಮಾತ್ರ ರಾಜೀನಾಮೆ ಅಂಗೀಕಾರವಾಗಲಿದೆ. ಅಕಸ್ಮಾತ್ ರಾಜೀನಾಮೆಗೆ ಇವರು ನೀಡುವ ಕಾರಣ ಸಮಂಜಸವಲ್ಲದಿದ್ದರೆ ಸ್ಪೀಕರ್ ಅವರ ರಾಜೀನಾಮೆಯನ್ನು ತಿರಸ್ಕರಿಸಬಹುದು ಅಥವಾ ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡುವ ಮೂಲಕ ಆಡಳಿತ ಪಕ್ಷಕ್ಕೆ ಸಹಾಯ ಮಾಡಬಹುದು. ಇದು ಸ್ಪೀಕರ್ ಮುಂದಿರುವ ಮೊದಲ ಆಯ್ಕೆ.
ಎರಡನೇ ಆಯ್ಕೆ ಎಂದರೆ ಆಡಳಿತ ಪಕ್ಷದ ದೂರಿನ ಮೇರೆಗೆ ಈ ಇಬ್ಬರೂ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು. ಇವರ ವಿರುದ್ಧ ಪಕ್ಷಾಂತರ ಕಾಯ್ದೆಯ ಅಡಿಯಲ್ಲಿ ಸ್ಪೀಕರ್ ಕ್ರಮ ತೆಗೆದುಕೊಂಡರೆ ಸ್ವಾಭಾವಿಕವಾಗಿ ಇವರ ಶಾಸಕ ಸ್ಥಾನ ಅನೂರ್ಜಿತವಾಗುತ್ತದೆ. ಈ ಮೂಲಕ ವಿಧಾನಸಭೆಯ ಸಂಖ್ಯೆ 224 ರಿಂದ 222ಕ್ಕೂ, ಸರ್ಕಾರದ ಮ್ಯಾಜಿಕ್ ನಂಬರ್ 113 ರಿಂದ 111ಕ್ಕೆ ಇಳಿಯಲಿದೆ. ಇದು ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಅನುಕೂಲವಾಗಲಿದೆ. ಇದೇ ಕಾರಣಕ್ಕೆ ಪ್ರಸ್ತುತ ಮೈತ್ರಿ ಸರ್ಕಾರ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸ್ಪೀಕರ್ ರಮೇಶ್ ಕುಮಾರ್ ಅವರ ಕಡೆಗೆ ಮುಖಮಾಡಿದೆ.
Comments are closed.