ಕರ್ನಾಟಕ

ರಾಜಧಾನಿಗೆ ಶರಾವತಿ ನೀರು; ಶಿವಮೊಗ್ಗದಲ್ಲಿ ಭುಗಿಲೆದ್ದ ಆಕ್ರೋಶ; ಜುಲೈ.10ಕ್ಕೆ ಬಂದ್​

Pinterest LinkedIn Tumblr


ಬೆಂಗಳೂರು(ಜೂನ್​.29): ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳುವ ಕುರಿತಾಗಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ದಿ ಸಚಿವ ಡಾ.ಜಿ ಪರಮೇಶ್ವರ್ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪರಿಸರ ಪ್ರೇಮಿಗಳು ಮತ್ತು ಪ್ರಗತಿಪರರು ಹೋರಾಟಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನಿಂದ 400. ಕಿ,ಮೀ ದೂರದಲ್ಲಿರುವ ಲಿಂಗಮಕ್ಕಿ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು, ಸಾಹಿತಿಗಳು ಹೋರಾಟದ ಹಾದಿ ಹಿಡಿದಿದ್ದಾರೆ. ಕೇವಲ 151 ಟಿಎಂಸಿ ನೀರು ಸಂಗ್ರಹವಾಗುವ ಜಲಾಶಯದಿಂದ ಬೆಂಗಳೂರಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಭುಗಿಲೆದ್ದ ಆಕ್ರೋಶ: ಮಲೆನಾಡಿಗರು, ಪರಿಸರ ಪ್ರಿಯರು ಬೆಂಗಳೂರಿಗೆ ನೀರಿನ ದಾಹ ನೀಗಿಸಲು ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಿಕೊಳ್ಳುವ ಯೋಜನೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ. ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ ತಾಲೂಕುಗಳು ಬರದಿಂದ ಬಳಲುತ್ತಿವೆ. ನಮಗೇ ನೀರಿನ ಅಭಾವ ಇದೆ. ಹೀಗಿದ್ದಾಗ ಬೆಂಗಳೂರಿಗೆ ನೀರು ಕೊಡಲು ಹೇಗೆ ಸಾಧ್ಯ ಎಂಬುದು ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಸರಬರಾಜು ಅವೈಜ್ಞಾನಿಕ ಯೋಜನೆ. ಹೀಗಾಗಿ, ಸರ್ಕಾರದ ಹುನ್ನಾರವನ್ನು ವಿರೋಧಿಸುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಈ ಯೋಜನೆ ಕೈಬಿಡದೇ ಹೋದಲ್ಲಿ, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅಲ್ಲದೇ ಜುಲೈ 10ಕ್ಕೆ ಶಿವಮೊಗ್ಗ ಬಂದ್​​ಗೆ ಕರೆ ನೀಡಿದ್ದು, ಪಕ್ಷಾತೀತವಾಗಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕೈಜೋಡಿಸಬೇಕೆಂದು ನಾಡಿನ ಜನತೆಗೆ ವಿನಂತಿಸಲಾಗಿದೆ.

ಶರಾವತಿ ಯೋಜನೆ ಮತ್ತು ಬಿಬಿಸಿ ವರದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಜಲಕ್ಷಾಮ ಎಂದು ಬಿಬಿಸಿ ಸುದ್ದಿವಾಹಿನಿ ವರದಿ ಮಾಡಿತ್ತು. ಕುಡಿಯುವ ನೀರಿನ ಅಭಾವ ಹೊಂದಿರುವ ಜಗತ್ತಿನ 11 ಮಹಾನಗರಗಳ ಸಮಸ್ಯೆಯನ್ನು ಬಿಬಿಸಿ ನ್ಯೂಸ್ ವಾಹಿನಿ ತೆರೆದಿಟ್ಟಿತ್ತು. ಈ ಬಾಯಾರಿದ ನಗರಗಳ ಸಾಲಿನಲ್ಲಿ ಬೆಂಗಳೂರು ಕೂಡ ಒಂದಾಗಿದೆ ಎಂದು ಹೇಳಿತ್ತು. ಇನ್ನೂ ಗಂಭೀರ ವಿಷಯವೆಂದರೆ ವಿಶ್ವದಲ್ಲಿಯೇ ನೀರಿನ ಕೊರತೆ ಎದುರಿಸುತ್ತಿರುವ 11 ನಗರಗಳ ಪೈಕಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಅಭಿವೃದ್ಧಿ ನಗರೀಕರಣದ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಂಡಿದ್ದು, ಬೆಂಗಳೂರು ಈ ರೀತಿಯ ದುಸ್ಥಿತಿಗೆ ತಲುಪಿದೆ ಎಂದು ವರದಿ ಮಾಡಿತ್ತು.

ಇನ್ನು 2030 ರ ವೇಳೆಗೆ ಜಗತ್ತಿನಾದ್ಯಂತ, ಶೇ.40 ರಷ್ಟು ಶುದ್ಧ ನೀರಿನ ಕೊರತೆ ಎದುರಾಗಲಿದೆ. ನಗರಗಳಿಗೆ ಹರಿದು ಬರುತ್ತಿರುವ ಭಾರಿ ಜನಸಂಖ್ಯೆ, ಜಲಮಂಡಳಿ ಅಸಮರ್ಪಕ ನಿರ್ವಹಣೆ, ನೀರಿನ ಮರುಬಳಕೆ, ತಂತ್ರಜ್ಞಾನ ಬಳಕೆ ಮಾಡದಿರುವ ಕಾರಣ ನಗರದಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಅಭಾವ ಕಾಡುತ್ತಿದೆ ಎಂದು ವರದಿ ಹೇಳಿದೆ.

ಶರಾವತಿ ಯೋಜನೆಗೆ ವಿರೋಧ: ಲಿಂಗಮಕ್ಕಿ ಜಲಾಶಯದ ನೀರಿನಿಂದ ಈಗಾಗಲೇ 1,035 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. 50 ಟಿಎಂಸಿ ನೀರನ್ನು ಕುಡಿಯುವ ಯೋಜನೆಗೆ ಬಳಸಿದರೆ, 150ರಿಂದ 200 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಸಂದರ್ಭ ಜೋಗದ ಭಾಗದಲ್ಲಿ 300ರಿಂದ 350 ಇಂಚು ಮಳೆಯಾಗುತ್ತಿತ್ತು. ಈಗ ಅದು 100ರ ಒಳಗೆ ಇದೆ. ಇರುವ ಕಾಡು ಉಳಿಸಿಕೊಳ್ಳದಿದ್ದರೆ ನಾಡಿಗೆ ಉಳಿಗಾಲವಿಲ್ಲ. ಈ ಯೋಜನೆ ಜಾರಿಗೆ ತರುವುದು ಮೂರ್ಖತನದ ಪರಮಾವಧಿ. ಈ ಹಿಂದೆ ಜಲಾಶಯಕ್ಕೆ 12 ಸಾವಿರ ಎಕರೆ ಭೂಮಿ ನೀಡಿ ನೆಲ ಮತ್ತು ಕಾಡು ಕಳೆದುಕೊಂಡಿದ್ದೇವೆ ಎಂದು ಪ್ರಗತಿಪರರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ದಕ್ಷಿಣ ಭಾರತಕ್ಕೆ ಜಲಮೂಲ ಪಶ್ಚಿಮಘಟ್ಟ ಪ್ರದೇಶವಾಗಿರುವ ಈ ಭಾಗದಲ್ಲೇ ಮಳೆ ಕೊರತೆ ಎದುರಾಗಿದೆ. ಕಳೆದ 10 ವರ್ಷಗಳಲ್ಲಿ ಮೂರು ಬಾರಿ ಮಾತ್ರ ಲಿಂಗನಮಕ್ಕಿ ಭರ್ತಿಯಾಗಿದೆ. ಜಲಾಶಯದ ಸರಾಸರಿ ನೀರಿನ ಮಟ್ಟ 151 ಟಿಎಂಸಿ ಇದ್ದರೂ, ಹೂಳು ತುಂಬಿರುವ ಕಾರಣ ವಾಸ್ತವದಲ್ಲಿ ಅಷ್ಟು ನೀರಿಲ್ಲ. ಬೆಂಗಳೂರಿಗೆ ಈ ನೀರು ತೆಗೆದುಕೊಂಡು ಹೋದರೆ ವಿದ್ಯುತ್ ಘಟಕಗಳು ಸ್ಥಗಿತವಾಗುತ್ತವೆ ಎಂದು ಪ್ರಜಾವಾಣಿಯೂ ಕೂಡ ವರದಿ ಮಾಡಿತ್ತು.

ಜಲ ವಿದ್ಯುತ್ ಯೋಜನೆಯಲ್ಲಿ ಈಗ ಉತ್ಪಾದಿಸುವ ವಿದ್ಯುತ್ ಸಾಲುತ್ತಿಲ್ಲ. ಹೀಗಾಗಿ ಭೂಗರ್ಭ ಯೋಜನೆಗೆ ಆಲೋಚಿಸುತ್ತಿದ್ದಾರೆ. ಆ ಮೂಲಕ 2 ಸಾವಿರ ಮೆಗಾವಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ವೇಳೆ ಇಲ್ಲಿಂದ ನೀರು ಏಕೆ ತೆಗೆದುಕೊಂಡು ಹೋಗಬೇಕು? ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮತ್ತು ಸಾವಿರಾರು ಮರಗಳು ನಾಶವಾಗುತ್ತವೆ. ಇದು ಅತ್ಯಂತ ವೆಚ್ಚದಾಯಕ ಎಂದು ತಜ್ಞರು ತಿಳಿಸಿದ್ದಾರೆ.

ನೀರಿನ ಅಭಾವಕ್ಕೆ ಪರ್ಯಾಯ ವ್ಯವಸ್ಥೆ: ಬೆಂಗಳೂರಿಗೆ 1004 ಎಂಎಲ್ ಡಿ ನೀರು ಹರಿದುಬರುತ್ತಿದೆ. 775 ಎಂಎಲ್ ಡಿಯಷ್ಟು ನೀರು ಕಾವೇರಿ 5 ನೇ ಹಂತದಿಂದ ಬರುತ್ತಿದೆ ಹಾಗಾಗಿ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲು ಸಾಧ್ಯವಿಲ್ಲ ಎನ್ನುತ್ತಿವೆ ಮೂಲಗಳು.

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಜಲಕ್ಷಾಮ ಎಂದು ಬಿಬಿಸಿ ಸುದ್ದಿವಾಹಿನಿ ಪ್ರಕಟಿಸಿದ ವರದಿಯನ್ನು ಬೆಂಗಳೂರು ಜಲಮಂಡಳಿಯೂ ತಳ್ಳಿ ಹಾಕಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನೀರಿನ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಿದ್ದೇವೆ. ಎಲ್ಲ ಕಟ್ಟಡಗಳಲ್ಲಿ ಎಸ್ ಟಿ ಪಿ ಅಳವಡಿಸಲು ಸೂಚಿಸಿದ್ದು, ನೀರು ಅಭಾವವನ್ನು ಸಂಭವಿಸದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಎಸ್ ಟಿಪಿ ಅಳವಡಿಕೆಯನ್ನು ಕಡ್ಡಾಯ ಗೊಳಿಸಿದ್ದೇವೆ. ಹಾಗಾಗಿ, ನೀರಿನ ಅಭಾವವಿರುವುದಿಲ್ಲ. ಶರಾವತಿ ನದಿಯಿಂದ ನೀರು ತರುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ನಗರದಲ್ಲಿ ಅಣೆ ಕಟ್ಟು ಕಟ್ಟಿ ನೀರಿನ ಶುದ್ಧ ಯೋಜನೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ಬ್ರ್ಯಾಂಡ್ ನ್ನು ಹಾಳು ಮಾಡುವ ಯತ್ನ ನಡೆಯುತ್ತಿದೆ ಎಂಬ ಬಿಬಿಸಿ ವರದಿಯನ್ನು ಜಲಮಂಡಳಿ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

Comments are closed.