ಕರ್ನಾಟಕ

ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಬಿಡಲು ಸುಮಲತಾ ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ

Pinterest LinkedIn Tumblr


ನವದೆಹಲಿ (ಜೂನ್​.20); ಕಾವೇರಿ ನದಿ ಪಾತ್ರದ ಭೂಮಿಗಳಲ್ಲಿನ ರೈತರ ಜೂನ್​ ಬೆಳೆಗಳಿಗೆ ಕನಿಷ್ಟ 2 ಟಿಎಂಸಿ ನೀರು ಬಿಡುವಂತೆ ಗುರುವಾರ ಮಂಡ್ಯ ಸಂಸದೆ ಸುಮಲತಾ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಪತ್ರ ನೀಡಿದ್ದಾರೆ.

ಸೋಮವಾರದಿಂದ ಲೋಕಸಭೆ ಅಧಿವೇಶನ ಆರಂಭವಾಗಿದೆ. ಮಂಡ್ಯ ಸಂಸದೆಯಾಗಿ ಮೊದಲ ಅಧಿವೇಶದಲ್ಲಿ ಪಾಲ್ಗೊಳ್ಳಲು ದೆಹಲಿ ತೆರಳಿರುವ ಸುಮಲತಾ ಮಂಡ್ಯ ಭಾಗದಲ್ಲಿ ಕಾವೇರಿ ನದಿಪಾತ್ರದ ಕೃಷಿ ಭೂಮಿಗಳು ನೀರಿಲ್ಲದೆ ಒಣಗುತ್ತಿವೆ. ಹೀಗಾಗಿ ಜೂನ್​ ತಿಂಗಳ ಬೆಳೆಗಳಿಗೆ ಅನುಕೂಲವಾಗುವಂತೆ 2 ಟಿಎಂಸಿ ನೀರು ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.

ಅಲ್ಲದೆ ಇದೇ ಸಂದರ್ಭದಲ್ಲಿ ರಾಜ್ಯದ ಸಂಸದ ಹಾಗೂ ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್​ ಜೋಶಿಯವರಿಗೂ ಸಹ ಸುಮಲತಾ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರಚಾರಕ್ಕಾಗಿ ಮನವಿ ಕೊಟ್ಟರಾ ಸುಮಲತಾ ಅಂಬರೀಶ್?

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಸುಮಲತಾ, “ಈ ವಿಚಾರವಾಗಿ ಸಂಸದೆಯಾಗಿ ನಾನು ಏನೂ ಮಾಡಲು ಸಾಧ್ಯವಿಲ್ಲ. ಈ ಕುರಿತು ರಾಜ್ಯ ಸರ್ಕಾರವೇ ಹೋರಾಟ ರೂಪಿಸಬೇಕು” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಾರಿ ವಿವಾದಕ್ಕೀಡಾಗಿತ್ತು, ಆ ನಂತರ ಈ ಕುರಿತು ಸ್ಪಷ್ಟನೆ ನೀಡಿದ್ದ ಅವರು, “ಇಷ್ಟು ಬಾಲಿಶವಾದ ಹೇಳಿಕೆಯನ್ನು ನಾನು ನೀಡಿಲ್ಲ” ಎಂದು ವಿವಾದಕ್ಕೆ ತೇಪೆ ಹಾಕಲು ಪ್ರಯತ್ನಿಸಿದ್ದರು.

ಆದರೆ, ಇಂದು ಅದಕ್ಕಿಂತ ಒಂದು ಹೆಜ್ಜೆ ಮುಂದುವರೆದಿರುವ ಸುಮಲತಾ ಮಂಡ್ಯ ಜಿಲ್ಲೆಯ ಕೃಷಿ ಭೂಮಿಗಳಿಗೆ 2 ಟಿಎಂಸಿ ನೀರು ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಅಸಲಿಗೆ ಮಂಡ್ಯಕ್ಕೆ ನೀರು ಬಿಡುವ ವಿಚಾರ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು. ಸುಮಲತಾ ಮನವಿ ಸಲ್ಲಿಸುವುದಾದರೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಏಕೆಂದರೆ ರಾಜ್ಯದ ಆಂತರಿಕ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುವಂತಿಲ್ಲ. ಈವರೆಗೆ ಮಂಡ್ಯ ಕೃಷಿ ಭೂಮಿಗಳಿಗೆ ನೀರು ಬಿಡುವಂತೆ ಕೇಂದ್ರ ರಾಜ್ಯವನ್ನು ಒತ್ತಾಯಿಸಿದ ಅಥವಾ ಆದೇಶಿಸಿದ ಇತಿಹಾಸವೇ ಇಲ್ಲ.

ಪರಿಸ್ಥಿತಿ ಹೀಗಿರುವಾಗ ಸುಮಲತಾ ಯಾವ ಕಾರಣಕ್ಕಾಗಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು? ಇದು ರಾಜಕೀಯ ಅನನುಭದ ಕೊರತೆಯ ಫಲವೋ? ಅಥವಾ ಮತ್ತೊಂದು ಪ್ರಚಾರದ ಗಿಮಿಕ್ಕೋ? ಎಂಬ ವಾದವೊಂದು ನೂತನ ಸಂಸದೆ ಸುಮಲತಾ ಕುರಿತು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ತಲೆ ಎತ್ತಿದೆ.

Comments are closed.