ಕರ್ನಾಟಕ

ಅತೃಪ್ತ ಕಾಂಗ್ರೆಸ್​ ಶಾಸಕರ ಬಂಡಾಯ ಶಮನಕ್ಕೆ ಮುಂದಾದ ಮೈತ್ರಿ ಸರ್ಕಾರ

Pinterest LinkedIn Tumblr

ಬೆಂಗಳೂರು(ಜೂನ್​​.20): ಅತೃಪ್ತ ಕಾಂಗ್ರೆಸ್​ ಶಾಸಕರ ಬಂಡಾಯ ಶಮನಕ್ಕೆ ಮೈತ್ರಿ ಸರ್ಕಾರ ಮುಂದಾಗಿದೆ. ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ಹಂಚಿಕೆ ಬಳಿಕ ಉಂಟಾಗಿದ್ದ ಭಿನ್ನಮತ ಸರಿಪಡಿಸಲು ಕಾಂಗ್ರೆಸ್​ ಮತ್ತು ಜೆಡಿಎಸ್​ನ ನಾಯಕರು ಶತಪ್ರಯತ್ನ ಪಡುತ್ತಿದ್ದಾರೆ. ಹಾಗಾಗಿಯೇ ಹಿಂದೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರೇ ತಪ್ಪಿಸಿದ್ದರು ಎನ್ನಲಾದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೀಗ, ಕಾಂಗ್ರೆಸ್​ ಶಾಸಕ ಡಾ. ಕೆ. ಸುಧಾಕರ್​​ ಅವರನ್ನೇ ಆಯ್ಕೆ ಮಾಡಲಾಗಿದೆ.

 

ಸದ್ಯ ಮಂಡಳಿಯ ಹಾಲಿ ಅಧ್ಯಕ್ಷ ಜಯರಾಮ್​​ ರಾಜೀನಾಮೆ ನೀಡಲಿದ್ದಾರೆ. ಇದೇ ವೇಳೆ ಕಾಂಗ್ರೆಸ್​​ ಅತೃಪ್ತ ಶಾಸಕ ಸುಧಾಕರ್​​ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೈತ್ರಿ ಸರ್ಕಾರಕ್ಕೆ ಕುತ್ತು ತರಲಿದೆ ಎನ್ನುತ್ತಿದ್ದ ಭಿನ್ನಮತಕ್ಕೆ ಮದ್ದು ನೀಡುವಲ್ಲಿ ರಾಜ್ಯ ನಾಯಕರು ಮೇಲ್ನೋಟಕ್ಕೆ ಸಫಲರಾಗಿರುವಂತೆ ಕಾಣುತ್ತಿದ್ದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

 

ಈ ಕುರಿತು ನ್ಯೂಸ್​-18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುಧಾಕರ್​​, “ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೋಕ್​​ ನೀಡಲಾಗಿತ್ತು. ಇದು ನಿಜಕ್ಕೂ ನನಗೆ ನೋವು ತಂದಿತ್ತು. ಪರಿಸರ ಕಾಳಜಿಯ ನನ್ನ ಸಾಮರ್ಥ್ಯ ನೋಡಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅವಕಾಶ ನೀಡಲಾಗಿತ್ತು. ಇದು ನನಗೆ ಬಯಸದೇ ಬಂದ ಭಾಗ್ಯವಾಗಿತ್ತು. ಆದರೆ ಕೊಕ್‌ ನೀಡಿದ್ದಾರೆ ಎಂದು ತಿಳಿದ ಮೇಲೆ ನನಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು,” ಎಂದರು.

 

ಹಾಗೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಂದಲೇ ನನಗೆ ಈ ಹುದ್ದೆ ತಪ್ಪಿದೆ ಎಂಬುದು ಗೊತ್ತಾಗಿತ್ತು. ರಾಹುಲ್‌ ಗಾಂಧಿ ಅವರೇ ನನ್ನ ಹೆಸರನ್ನು ಕ್ಲಿಯರ್‌ ಆಗಿ ಸೂಚಿಸಿದ್ದರು. ಆದರೆ, ಕುಮಾರಸ್ವಾಮಿ ದೆಹಲಿಯಲ್ಲಿ ರಾಹುಲ್‌ ಅವರನ್ನು ಭೇಟಿ ಮಾಡಿದ ನಂತರ ಎಲ್ಲವೂ ಬದಲಾಗಿತ್ತು ಎಂದು ಆರೋಪಿಸಿದರು.

 

ಹೀಗೆ ಮಾತು ಮುಂದುವರೆಸಿದ ಅವರು, ಸದ್ಯ ಎಚ್ಚೆತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಆಯ್ಕೆ ಮಾಡಿದ್ದಾರೆ. ಏನೇ ಆದರೂ ನನ್ನ ಆತ್ಮಗೌರವಕ್ಕೆ ಚ್ಯುತಿ ತಂದಿದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಅಲ್ಲದೇ ಟ್ವೀಟ್​ ಮೂಲಕ ರಾಹುಲ್​​ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ಧನ್ಯವಾದ ಕೂಡ ತಿಳಿಸಿದ್ದಾರೆ ಕಾಂಗ್ರೆಸ್​​ ಶಾಸಕ ಸುಧಾಕರ್​.

 

Comments are closed.